
ಮರಳ ದಂಡೆಯ ಮೇಲೆ
ಮಗುಚಿ ಬಿದ್ದಿಹೆನಿಲ್ಲಿ
ನನ್ನವರು ಯಾರಿಲ್ಲ
ಈ ಕ್ಷಣದಿ ಜೊತೆಯಲ್ಲಿ
ನಲ್ಲೆಯನು ಆತುಕೊಂಡು
ಜೊತೆಯಿದ್ದೆ ಕ್ಷಣ ಕ್ಷಣಕೂ
ಅವಳೆಲ್ಲೋ ನಾನೆಲ್ಲೋ
ಈಗೆಲ್ಲಿ ಆ ಬದುಕು?
ಇಬ್ಬರೂ ಜೊತೆ ಸೇರಿ
ಮಳೆ ಹನಿಯನು ಹೀರಿ
ನಮಗರಿವಿಲ್ಲದೆ ಮೂಡಿತ್ತು
ನಮ್ಮ ನಡುವೆ ಸ್ವಾತಿ ಮುತ್ತು
ಯಾರ ಹಂಗೂ ಇರದೆ
ನಾವು ನಮ್ಮಯ ಬದುಕು
ಹಿತವಾಗಿ ಇದ್ದೆವು
ಇರದೆ ಯಾವುದೆ ಬಿರುಕು
ಕ್ಷಣದಲ್ಲಿ ಮನುಜನ ಕೈಲಿ
ಇತ್ತು ನಮ್ಮ ಬದುಕು
ಮೃದ್ವಂಗಿ ಅವನೂಟದ ತುತ್ತು
ಮುತ್ತದುವೆ ಅವನ ನಲ್ಲೆಯ ಸೊತ್ತು
ಛಿದ್ರಗೊಂಡ ನಾನು
ಬಿದ್ದಿಹೆನು ಇಲ್ಲಿ...
ಬದುಕು ಶೂನ್ಯ
ಉಳಿದಿಲ್ಲ ಏನಿಲ್ಲಿ....