Monday, November 8, 2010

ಛಿದ್ರಗೊಂಡ ಬದುಕು...

ಹೀಗೆ ನನ್ನ friend ಪ್ರದೀಪ್ profileಲಿ ಒಂದು photo ಕಂಡೆ...ಯಾಕೋ ಇಷ್ಟ ಆಯ್ತು....ಕವನ ಬರಿಬೇಕು ಅನ್ನಿಸಿತು, ಹಾಗೆ ಗೀಚಿದೆ....ಕೇಳಿದ ತಕ್ಷಣ photo mail ಮಾಡಿದ ಪ್ರದೀಪ್ ಗೆ ನನ್ನ thanks...thank u pradeep...

ಮರಳ ದಂಡೆಯ ಮೇಲೆ
ಮಗುಚಿ ಬಿದ್ದಿಹೆನಿಲ್ಲಿ
ನನ್ನವರು ಯಾರಿಲ್ಲ
ಈ ಕ್ಷಣದಿ ಜೊತೆಯಲ್ಲಿ

ನಲ್ಲೆಯನು ಆತುಕೊಂಡು
ಜೊತೆಯಿದ್ದೆ ಕ್ಷಣ ಕ್ಷಣಕೂ
ಅವಳೆಲ್ಲೋ ನಾನೆಲ್ಲೋ
ಈಗೆಲ್ಲಿ ಆ ಬದುಕು?

ಇಬ್ಬರೂ ಜೊತೆ ಸೇರಿ
ಮಳೆ ಹನಿಯನು ಹೀರಿ
ನಮಗರಿವಿಲ್ಲದೆ ಮೂಡಿತ್ತು
ನಮ್ಮ ನಡುವೆ ಸ್ವಾತಿ ಮುತ್ತು

ಯಾರ ಹಂಗೂ ಇರದೆ
ನಾವು ನಮ್ಮಯ ಬದುಕು
ಹಿತವಾಗಿ ಇದ್ದೆವು
ಇರದೆ ಯಾವುದೆ ಬಿರುಕು

ಕ್ಷಣದಲ್ಲಿ ಮನುಜನ ಕೈಲಿ
ಇತ್ತು ನಮ್ಮ ಬದುಕು
ಮೃದ್ವಂಗಿ ಅವನೂಟದ ತುತ್ತು
ಮುತ್ತದುವೆ ಅವನ ನಲ್ಲೆಯ ಸೊತ್ತು

ಛಿದ್ರಗೊಂಡ ನಾನು
ಬಿದ್ದಿಹೆನು ಇಲ್ಲಿ...
ಬದುಕು ಶೂನ್ಯ
ಉಳಿದಿಲ್ಲ ಏನಿಲ್ಲಿ....

Monday, September 27, 2010

ನಿನಗಿನ್ನೇನ ಹೇಳಲಿ ....

ಅಮ್ಮಾ....ಇದು ನಿನಗೆ.... ಈ ನಿನ್ನ ಕೂಸಿನ ಅರ್ಪಣೆ......




ನಾ ಭುವಿಗೆ ಬರುವ ದಿನಕೆ

ನೀ ಕಾದಿದ್ದೆ ಕ್ಷಣ ಕ್ಷಣ

ಪ್ರತಿ ಸ್ಪರ್ಶವ ಆಸ್ವಾದಿಸಿ

ನಲಿದಿತ್ತು ನಿನ್ನ ಮನ..


ಹೇಳಲಾರದ ಭಾವ

ಮುರಿಯಲಾರದ ಬಂಧ...

ನಿನಗಿನ್ನೇನ ಹೇಳಲಿ

ಅಮ್ಮಾ ಎಂದಲ್ಲದೆ...


ಮೊದಲ ಮುತ್ತು

ಮೊದಲ ತುತ್ತು

ಮೊದಲ ಪೆಟ್ಟು

ಎಲ್ಲ ಮೊದಲುಗಳ ಮೊದಲು..

ನೀನೆ ತಾನೇ

ನಿನಗಿನ್ನೇನ ಹೇಳಲಿ ಅಮ್ಮಾ ಎಂದಲ್ಲದೆ...


ನನ್ನ ನೋವಿಗೆ

ನಿನ್ನ ಸ್ಪಂದನೆ

ನನ್ನ ಏಳ್ಗೆಗೆ ಪ್ರತಿಕ್ಷಣವು ಚಿಂತನೆ

ನನಗೆ ಎಲ್ಲವು ನೀನೇ ತಾನೇ

ನಿನಗಿನ್ನೇನ ಹೇಳಲಿ ಅಮ್ಮಾ ಎಂದಲ್ಲದೆ


ನಡೆಯ ಕಲಿಸಿ

ನುಡಿಯ ಕಲಿಸಿ

ಬೊಗಸೆ ಕಂಗಳ ಕನಸು..

ನನಗೆ ಕೇಳದೆ ನನಸು ಮಾಡಿದವಳು..

ನೀನೇ ತಾನೇ..

ನಿನಗಿನ್ನೇನ ಹೇಳಲಿ ಅಮ್ಮಾ ಎಂದಲ್ಲದೆ


ನನ್ನುಸಿರಿನ ಮೊದಲಿಂದ

ನಿನ್ನುಸಿರ ಕೊನೆಯವರೆಗೂ

ನನಗಾಗಿ ಬದುಕುವವಳು

ನೀನೇ ತಾನೇ

ನಿನಗಿನ್ನೇನ ಹೇಳಲಿ ಅಮ್ಮಾ ಎಂದಲ್ಲದೆ...

Wednesday, September 8, 2010

ಒಮ್ಮೆ ಯೋಚಿಸು...


ಮನವು ಖಾಲಿ ಹಾಳೆ
ಒಮ್ಮೆ ಯೋಚಿಸು ನೀ
ಗೀಚುವಾ ಮುನ್ನ


ಗೀಚಿದ ಗೆರೆಯಳಿಸಿದರೂ
ಅಚ್ಚು ಉಳಿದುಹೋಗುವುದು
ಮತ್ತೆ ತಿದ್ದಲು ಹೋದರೆ
ಗಾಯವಾಗುವುದು

ಹಸಿಮಣ್ಣಿನ ನೆಲದಿ ಇಟ್ಟ
ಹೆಜ್ಜೆಯಂತೆ ಇದುವೆ...
ಒಮ್ಮೆ ಮೂಡಿದ ಗುರುತು
ಉಳಿದುಹೋಗುವುದು


ಬದುಕ ಹಾಳೆಯಲಿ
ನೂರಾರು ಬರಹಗಳು
ಒಬ್ಬೊಬ್ಬರದ್ದು
ಒಂದೊಂದು ಶೈಲಿ


ಮರೆಯದಿರು ನೀನು
ಪ್ರತಿ ಬರಹವು ಭಿನ್ನ
ಹೇಗೆ ತಾನೇ ಮರೆಯಲಿ
ನಿನ್ನ ಕೈ ಬರಹವನ್ನ


ಒಮ್ಮೆ ಯೋಚಿಸು ನೀ ಗೀಚುವಾ ಮುನ್ನ...
ನಿನ್ನ ಗೀಚಿಗೆ ಗೀರಾಗುವುದು ನನ್ನ ಮನ...


Thursday, September 2, 2010

ನನ್ನವನು......!!!??



ಸುಮ್ಮನೆ ಕುಳಿತವಳ
ಮುಂಗುರುಳ ಸವರಿ
ಕಚಗುಳಿಯಿಡುವ
ಕಳ್ಳನಿವನು

ಜೊತೆಯಿರುವೆನೆಂಬ
ಪೊಳ್ಳು ಭರವಸೆಯ ಕೊಡದೆ
ಹೇಳದೆಯೂ ಜೊತೆಯಿದ್ದ
ಜೊತೆಗಾರನಿವನು

ಮಾಗಿ ಮುಂಜಾನೆಯಲಿ
ಮೌನದ ರಾತ್ರಿಯಲಿ
ರೋಮಾಂಚನದಿ ನಶೆಯೇರಿಸುವ
ತುಂಟನಿವನು

ಕತ್ತಲಲಿ ಬೆದರಿ
ಕಂಬನಿಯ ಮಿಡಿವಾಗ
ಮಾತಿಲ್ಲದೆ ಕಂಬನಿಯ
ಒರೆಸಿದವನು...

ತಂಗಾಳಿಯಂತೆ ಬಂದು
ಬಿರುಗಾಳಿಯೆಬ್ಬಿಸಿ ಹೋದ
ನೆನಪಿನ ಧೂಳೆರಚಿ
ನನ್ನ ಅಳಿಸಿದವನು....
ನನ್ನವನು.......ತಂಗಾಳಿ......!!!???




Wednesday, August 25, 2010

ಏನ ಹೇಳಲಿ ಈ ಬಂಧಕೆ....





ಹೆಸರಿಲ್ಲದಾ ಜಾಗ
ಹೆಸರಿಲ್ಲದಾ ಬಂಧ
ಅರ್ಥವ ಹುಡುಕುತಾ
ನಿಂತಿಹೆನು ಇಲ್ಲಿ

ಲೋಕದಾ ಮಾತಿಗೆ
ಮೌನದಿ ಬಿಕ್ಕಳಿಸಿ
ಕೂಗಿಹೇಳಲಾಗದೆ ಸೋತಿಹೆ
ಮೌನವೇ ಲೇಸಿಲ್ಲಿ

ಕಳೆದುಹೋಗಿದ್ದೆ ನಾ
ಸ್ವಾರ್ಥಿಗಳ ಲೋಕದಲಿ
ದಾರಿಯಾ ಹುಡುಕುತ
ನಿಂತಿದ್ದೆ ಗೊಂದಲದಲಿ

ನಿನ್ನ ನೋಟಕೆ
ಬೆಚ್ಚಿದ್ದೆ ಒಂದು ಕ್ಷಣ
ಅಲ್ಲೇ ನೋಟದಲೇ ಎನ್ನಂತರಂಗವ
ಅರಿತಿತ್ತು ನಿನ್ನ ಮನ

ಜೊತೆ ನಡೆದ
ಕ್ಷಣಗಳೆಷ್ಟೋ
ಸಾಗಿ ಬಂದ
ದೂರವೆಷ್ಟೋ

ನೋಡಿ ನಕ್ಕರು
ಹುಚ್ಚು ಎಂದರು
ಮತ್ತೆ ಕೆಲವರು
ಪ್ರೇಮವೆಂದರು

ಹೇಗೆ ಹೇಳಲಿ
ನಮ್ಮ ಬಂಧದರ್ಥವ
ವಾತ್ಸಲ್ಯಮಯ
ಅನುಬಂಧವ

ಮತ್ತೆ ಯೋಚಿಸಿ
ಮನವ ಶೋಧಿಸಿ
ಅರ್ಥ ಹುಡುಕಿ ಹೆಸರ ನೀಡಿ ಬಂಧಿಸಿದೆ
ಅದುವೆ ರಕ್ಷಾಬಂಧನ

ನಕ್ಕ ಜಗವು
ಮೆಚ್ಚುವ ಬಂಧವಿದು


ಪುಟ್ಟ ದಾರ
ಮಮತೆ ಅಪಾರ...

Sunday, August 15, 2010

ಮತ್ತೆ ಬಂದಿದೆ....




ಮತ್ತೆ ಬಂದಿದೆ ೧೫ ಆಗಸ್ಟು,

ಎಲ್ಲರ ಎದೆಯಲಿ ದೇಶಾಭಿಮಾನ, ಶಿಸ್ತು,

ಕೆಲವು ದಿನಗಳು ಮಾತ್ರ ಕೇಸರಿ ,ಬಿಳಿ ,ಹಸಿರು

ನಮ್ಮೆಲ್ಲರ ಉಸಿರು...

ನಂತರ??

ಯಾರಿಗೆ ಗೊತ್ತು?

ನಮ್ಮ ಅಭಿಮಾನದ ಪ್ಲಾಸ್ಟಿಕ್ ಧ್ವಜ..

ಕಸದಬುಟ್ಟಿಯ ಸೊತ್ತು.

ಬೇಕೇ ಈ ತಾತ್ಕಾಲಿಕ ಅಭಿಮಾನ?

ತೋರೋಣ ಸ್ವಾಭಿಮಾನ,

ಎಲ್ಲರ ಹಿಡಿದೆತ್ತೋಣ..

ಒಂದಾಗಿ ಮುನ್ನಡೆಯೋಣ....



‘some’ಬಂಧ

ಜೀವನದಲ್ಲಿ ಬರುವ ‘some’ಬಂಧಗಳ ಬಗ್ಗೆ ಹೀಗೆ ಗೀಚಿದ್ದು........












ನವಿರಾದ ಎಳೆಮೇಲೆ
ಸಂಭ್ರಮದ ತೋರಣವ ಹೇರಿ
ಹಬ್ಬದಾಚರಣೆಯ
ಕನಸು ಕಟ್ಟಿದ್ದೆ


ಅಕ್ಕರೆಯ ಸಕ್ಕರೆಯ
ಮಾತಿಗೆ ಬೆರಗಾಗಿ
ಮನಬಿಚ್ಚಿ ನಲಿದಾಡಿ
ಸಂತಸದಿ ನಾನಿದ್ದೆ

ಮರಳ ಹಾದಿಯಲಿರುವ
ಮರೀಚಿಕೆಯದೆಂದು
ಅರಿವಾಯಿತೆನಗೆ
ಬಹಳ ತಡವಾಗಿ

ಸವಿ ಮಾತ ಅರಸುತ್ತ
ನಂಬಿ ಮುನ್ನಡೆಯುತ್ತ
ಅರಿವಿಲ್ಲದೆ ಜೇನುಗೂಡಿನಲಿ
ಕೈ ಇಟ್ಟಿದ್ದೆ ನಿನಗಾಗಿ

ಮೆಚ್ಚಬೇಕು ನಿನ್ನ ಕಲೆಯ
ನಾಜೂಕಾಗಿ
ಜೇಡದಂತೆ ಹೆಣೆವೆ
ಸಂಬಂಧದ ಬಲೆಯ

ಬಲೆಗೆ ಬಿದ್ದು ನರಳುವರ ಕಂಡು
ಎಳೆ ಹರಿದು ಮರುಗುವರ ಕಂಡು
ನಸು ನಕ್ಕು
ಅಂಟಿಯೂ ಅಂಟದೆ ಮತ್ತೆ ಬಲೆ ಹೆಣೆವ
ನಿನ್ನ ಕ್ರೌರ್ಯಕೆ ಏನ ಹೇಳಲಿ....


Sunday, August 8, 2010

ನೆನಪಿನ ಹನಿ...

'ಬಾಲ್ಯ ಅನ್ನೋದು ಅವಿಸ್ಮರಣೀಯ.ಎಲ್ಲರೂ ಮತ್ತೆ ಬಾಲ್ಯವನ್ನ ಮೆಲುಕು ಹಾಕೋದು ಸಹಜ...ಮಳೆಗಾಲದಲ್ಲಿ ತಂಗಿಗೆ ಮೂಡುವ ಅಣ್ಣನ ನವಿರಾದ ನೆನಪಿನ ತುಂತುರು ಇಲ್ಲಿದೆ.'













ಬಿಸಿಬಿಸಿ coffie ಕುಡಿತಾ ಕೂತಿದ್ದೆ....ಹೊರಗೆ ಮಳೆ ಜೋರಾಗಿ ಬರ್ತಿತ್ತು....ಬಾಗಿಲು ಹಾಕದೇ ಬಂದಿದ್ದು ನೆನಪಾಗಿ ಓಡಿ ಬಂದೋಳಿಗೆ ಯಾಕೋ ಮಳೆಯಲ್ಲಿ ನೆನೆಯೋ ಆಸೆ ಆಯ್ತು....ಮುಖದ ಮೇಲೆ ಪಟಪಟನೆ ಮಳೆಹನಿ ಬೀಳುತ್ತಿದ್ದಂತೆ ಮನಸಲ್ಲಿ ನೆನಪಿನಾ ಮಳೆ....




ಗುಡುಗಿನಾ ಸದ್ದು ಕೇಳಿ ‘ಗುಡುಗುಮ್ಮ ಬಂದ..ಹೆಡಿಗೆ ತಂದ...ಭತ್ತ ಬೇಡ ಅಂದ ಅಡಿಕೆ ಬೇಡ ಅಂದ...ನಮ್ಮ ಪುಟ್ಟಿನೆ ಬೇಕು ಅಂದ.’ಗುಡುಗಿಗೆ ಗುಮ್ಮನ ರೂಪ ಕೊಟ್ಟು ಅಜ್ಜ ನಮ್ಮನ್ನು ಮಲಗಿಸ್ತಿದ್ದಿದ್ದು....ನಾವೇನು ಕಮ್ಮಿ.....ಅಜ್ಜನ ಮಲಗಿಸಿ ನಾವು ಓಡಿ ಬರೋದು.. ಯಾರಿಗೂ ಗೊತ್ತಾಗದಂತೆ ಅಟ್ಟಕ್ಕೆ ಹೋಗಿ ಆಟ ಆಡಿದ್ದು....ಶಾಲೆಯಿಂದ ಬರುವಾಗ ನೀರಾಟ ಆಡಬೇಕು ಅಂತಾನೆ ಸುತ್ತಿ ಬಳಸಿದ ದಾರೀಲಿ ಬರೋದು..ಅಲ್ಲಿ ಹರಿವ ನೀರಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು..ಆಟ ಆಡ್ತಾ...ಪುಟಾಣಿ ಜಲಪಾತಕ್ಕೆ ನಮ್ಮದೇ ಹೆಸರು ಕೊಡ್ತಾ..ಮತ್ತೆ ಈ ಭಾನುವಾರ ಎಲ್ಲಿ ಹೋಗೋದು ಅಂತಾ plan ಮಾಡ್ತಾ ಮನೆಗೆ ಬರೋಹೊತ್ತಿಗೆ ಮೈ ಎಲ್ಲ ಒದ್ದೆ....ಅಮ್ಮ ದೊಡ್ಡಮ್ಮ ಸ್ವಲ್ಪ ಮಂಗಳಾರತಿ ಮಾಡ್ತಿದ್ರೂ ಅಣ್ಣ ನಾನು ಮುಖ ಮುಖ ನೋಡ್ಕೊಂಡು ನಗ್ತಾ ಚೇಷ್ಟೆ ಮಾಡೋದ ನೋಡಿ ಅವರಿಗೂ ನಗು ಬರ್ತಿತ್ತು....


‘ಅಣ್ಣನದು ಸ್ನಾನ ಆಯ್ತು ಬೇಗ ಹೋಗೆ ಶಾಲೆಗೆ ಹೊತ್ತಾಯ್ತು...’ಅಂತ ಅಮ್ಮ ಕೂಗಿದ್ಮೇಲೆ ಕಣ್ಣುಜ್ಜುತ್ತಾ ಹಾಗೆ ಸ್ನಾನಕ್ಕೆ ಓಡಿದ್ದು...ತಿಂಡಿಗೆ ಕೂತರೆ ಅಂತು ಮುಗಿತು...ನಿನ್ನೆ ನನ್ನ ಕನಸಲ್ಲಿ ಹಾಗೆ ಹೀಗೆ ಅಂತಾ ಕತೆಹೊಡಿತಿದ್ದೊರು ಅಪ್ಪ ಬಂದ್ರೆ ಮಾತ್ರ ಗಪ್ ಚುಪ್...ಆಮೇಲೆ ಶಾಲೆಲಂತೂ ನಾವೇ donಗಳು..ಹೇಳೋರಿಲ್ಲ ಕೇಳೋರಿಲ್ಲ...ಕಳ್ಳ ಪೋಲಿಸ್ ಆಟ ಆಡೋದು...slate ಒರೆಸೋದಕ್ಕೆ ನೀರು ದಂಟು ಹುಡ್ಕೊಂಡು ಹೋಗೋದು...ದಾಲ್ಚಿನಿ ಸೊಪ್ಪು ತಿನ್ನೋದು...ಹೀಗೆ ಒಂದ ಎರಡಾ....ಮತ್ತೆ ಮನೆಗ ಬಂದು ಬೆಂಕಿ ಕಾಸೋದು ಆಹಾ...ಏನ್ ಮಜಾ...ಹಲಸಿನ ಬೀಜ ಸುಡೋದು...ನಂಗೆ ಜಾಸ್ತಿ ಬೇಕು ಅಂತಾ ತಕರಾರು ಬೇರೆ.....ಗೇರು ಬೀಜ ಸುಟ್ಟು ತಿನ್ನೋದು...ಬಾಳೆಹಣ್ಣು ಸುಟ್ಟು ತಿನ್ನೋದು...ಆಹಾ ..ಹ್ಮ್ಮ್ಮ್ ಬಾಯಲ್ಲಿ ನೀರು ಬರತ್ತೆ....ಈಗ super marketಗೆ ಹೋದ್ರೆ ಏನ್ ಬೇಕೋ ಸಿಗತ್ತೆ... ಬೇಕಾದ್ರೆ oven ಅಲ್ಲಿ ಇಟ್ಟು ತಿನ್ನ್ಬೇಕಷ್ಟೇ...ಆದ್ರೆ ಅಪ್ಪನೋ ಅಮ್ಮನೋ ಬಿಸಿ ಇರೋದನ್ನ ಆರಿಸಿ ನಮ್ಮ ಎಳೆಯ ಕೈಗೆ ಬಿಸಿ ತಾಗದಂತೆ ತಿನ್ನೋಕೆ ಕೊಡ್ತಿದ್ದಿದ್ದು...ಆ ಪ್ರೀತಿ ಕಾಳಜಿ ಯಾವ super marketಅಲ್ಲಾದ್ರೂ ಸಿಗತ್ತಾ....
ನಮ್ದಂತು ಹಳ್ಳಿ ಮನೆ ಹಾಗಾಗಿ ಕರೆಂಟ್ ಇರೋದು ಕನಸಿನ ಮಾತು....ನಮಗೆ TV radio ಎಲ್ಲ ನಮ್ಮ್ ದೊಡ್ದಪ್ಪನ ಕಥೆನೇ...ಭಸ್ಮಾಸುರ ಮೋಹಿನಿ ಕಥೆ ಅಂತು ನನ್ನ್ fav. ಕಥೆ....ಹಾಗೆ ಕಥೆ ಕೇಳ್ತಾ ಕೇಳ್ತಾ ಮಲಗಿದ್ದು....ನೆನಪು ಎಷ್ಟು ಚಂದ ಅಲ್ವಾ...


ಹ್ಮಂ ಹೀಗೆ ನೆನಪಿನ ಮಳೇಲಿ ತೊಯ್ತ ಇದ್ದೊಳನ್ನ ring ಆಗ್ತಿದ್ದ mobile ವಾಸ್ತವಕ್ಕೆ ಎಳ್ಕೊಂಡು ಬಂತು....ಅರೇ ಏನು ಆಶ್ಚರ್ಯ...ಅಣ್ಣ call ಮಾಡ್ತಿದ್ದಿದ್ದು...ಏನೋ ಮಾರಾಯ ಚೌತಿ ಹಬ್ಬಕ್ಕಾದ್ರೂ ಬಾರೋ..ಕೂತ್ಕೊಂಡು ಕಥೆ ಹೊಡಿದೆ ಎಷ್ಟೊಂದು ದಿನ ಆಗೋಯ್ತು..ಅಂತಾ ನಾ ಹೇಳ್ತಿದ್ದ್ರೆ ಅಣ್ಣ ತಗ್ಗಿದ ಧ್ವನಿಲಿ ಈ ಸಾರಿನೂ ಊರಿಗೆ ಬರೋಕಾಗಲ್ಲ ಕಣೆ ರಜೆ ಇಲ್ಲವೆ ಅಂತಾ ಹೇಳಿದ್ದ...



ದೊಡ್ದೊರಾಗೋದು ಅಂದ್ರೆ ಇದೇನಾ...ಅಂದು ಕೈ ಕೈ ಹಿಡ್ಕೊಂಡಿದ್ದ್ವಿ...ಕನಸು ಕಣ್ಣಲ್ಲಿತ್ತು..ಇಂದು...ಕನಸು ನನಸಾಗಿದೆ..ಆದ್ರೆ ಕೈ ತಪ್ಪಿ ಹೋಗಿದೆ....ಜೊತೆ ಜೊತೆಯಲ್ಲೇ ತಿರ್ಗಾಡ್ತಿದ್ದ ನಮ್ಮ ನಡುವೆ ಈಗ ಸಾಗರಗಳ ಅಂತರ.....ಅಂತರಂಗದ ಬೇಸರ ಸಾಗರದಷ್ಟೇ ಆಳ....


ಮತ್ತೆ ಭೇಟಿ ಯಾವಾಗಲೋ....ಜೀವನ ಅಂದ್ರೆ ಹೀಗೆ ಅನ್ಸತ್ತೆ ಅಲ್ವಾ....ಊರಲ್ಲಿ ಅದೇ ಪುಟಾಣಿ ಬೆಚ್ಚಗಿನ ಗೂಡು...ಜೋರು ಮಳೆ...ಏನೂ ಬದಲಾಗಿಲ್ಲ....
ಈಗ ಶಾಲೆಗೇ ಹೋದ್ರೆ ಅದೇ ಖಾಲಿ corridor...once upon a time ನಾವು ಆಟ ಆಡಿದ play ground.ಸುತ್ಲೂ ಕಂಗೊಳಿಸೋ ಹಸಿರು..ಎಲ್ಲಾ ಹಾಗೇ ಇದೆ...ನಮ್ಮ ನಡುವಿನ ಪ್ರೀತಿ..ಅದೂ ಹಾಗೆ ಇದೆ....ಹಾಗಾದ್ರೆ ಬದಲಾಗಿದ್ದು.....ಕಾಲ ಮಾತ್ರ....
ಸವಿ ಸವಿ ನೆನಪು.....ಕಣ್ಣಂಚಲ್ಲಿ...ಕಣ್ಣೀರ ನೆನಪು...ಅಂತಾ ಹಾಡು ಗುನುಗುತ್ತಿದ್ದೋಳಿಗೆ ಯಾಕೋ ವಾಸ್ತವ ಬೇಡ ಅನ್ನಿಸ್ತು....

Saturday, July 31, 2010

ಬಂದೆನೇ ಸುಮ್ಮನೆ....

ಪುಟ್ಟ ಹೆಣ್ಣು ಮಗುವಿನ ನೋವು......



ನವಮಾಸಗಳ ಕೊನೆಯವರೆಗೂ
ಅಮ್ಮನೊಡಲೇ ಎನ್ನ ಅಂಗಳ
ಅ ವಾತ್ಸಲ್ಯಮಯ ಪ್ರತಿ ಉಸಿರಲಿ
ಕಂಡೆ ನಾ ಪ್ರೀತಿಯ ಬೆಳದಿಂಗಳ

ಅವಳ ನಡಿಗೆಯೇ ಎನಗೆ ಉಯ್ಯಾಲೆ ಆಟ
ಅವಳು ತಿಂದಾ ತುತ್ತೇ ಅಮೃತದ ಊಟ
ಲಯಬದ್ಧ ಎದೆಬಡಿತವೆ ನಿತ್ಯ ಲಾಲಿ
ಹೀಗೆ ಸುಖದಲಿ ಇದ್ದೆ ಎಲ್ಲ ಎಲ್ಲೆಯ ಮೀರಿ

ಅಮ್ಮನ ಆ ಆಕ್ರಂದನ ನನ್ನ ಎಚ್ಚರಿಸಿತ್ತು
ನಾ ಏ ಭುವಿಗೆ ಬರುವ ಸಮಯ ಬಂದಿತ್ತು
ಆ ದೈವಕೆ ನೋವಿತ್ತ ಬೇಸರದಿ ನಾ ಅತ್ತೆ
ಸುಖವ ಕಳೆದುಕೊಂಡು ನಿಜದಿ ನಾ ಬೇಸತ್ತೆ

ಎಲ್ಲರ ಮಡಿಲೊಳಗೆ ಮುದ್ದು ಕೂಸಾಗಬಯಸಿದ್ದೆ
‘ಅಯ್ಯೋ ಹೆಣ್ಣೇ ‘ಎಂಬ ಉದ್ಗಾರದಿ ನಾ ಪಾತಾಳಕ್ಕಿಳಿದಿದ್ದೆ
ನಾ ಹೆಣ್ಣಾದುದರಲಿ ಯಾರ ತಪ್ಪಿಹುದು?
ನನದೆ?ನನ್ನವ್ವನದೇ?ಸೂತ್ರಧಾರ ಆ ಭಗವಂತನದೇ?

ನನ್ನ ದೈವದಾ ನೋವ ನಾ ನೋಡಲಾರೆ
ಎಲ್ಲರಾ ತಿರಸ್ಕಾರ ನಾ ಸಹಿಸಲಾರೆ
ನೀ ನೀಡಿದ ಜನ್ಮ ನಿನಗೇ ಇರಲಿ ದೇವಾ
ಹೆಣ್ಣಾಗಿ ಹುಟ್ಟಿದ್ದಕ್ಕೆ ನಾ ತೊರೆಯುವೆ ಈ ಜೀವ

ಕಣ್ಣೊಳಗಿನ ತಾಯಿಯ ಆ ರೂಪ ಕರಗುತ್ತಿದೆ
ಒಡಲಾಳದ ನೋವಿಗೆ ಜೀವಜಲ ಇಂಗುತಿದೆ
ಮತ್ತೆ ಕತ್ತಲಿನೆಡೆಗೆ ಹೊರಡುವಾ ಮನಸಾಗಿದೆ
ನಾ ಹೋಗುವೆ ತಿರುಗಿ ಬಾರದೆಡೆಗೆ

ತಪ್ಪಿಲ್ಲದಾ ಜೀವ ನಿರ್ಜೀವವಾಯಿತು
ಸದ್ದಿಲ್ಲದ ಮನೆಬೆಳಕು ಆರಿಹೋಯಿತು

Wednesday, July 28, 2010

M@N@SU

ಮನವೆಂಬ operating system
ಯಾಕೋ ಮಂಕಾಗಿದೆ
ತುಂಬಿಕೊಂಡ errorಗಳ
debug ಮಾಡಲಾಗದೆ

ಛಲ ಬಲಗಳ ಜೊತೆಗೆ
ಖಚಿತವಿತ್ತು ಆ destination
ಇಂದೇಕೋ ಸರಿಹೊಂದುತ್ತಿಲ್ಲ
ಮನಸಿನ ಬುದ್ಧಿಯ combination

ಏನಿರಬಹುದು
ಆ ದೇವನಾ logic
ಹಣೆಬರಹದ software
ಅದುವೆ ಅರ್ಥವಾಗದ topic

ಸಂಬಂಧಗಳ linked list ನ
link ತಪ್ಪಿಹೊಯಿತೆ?
ಕಾಡುವಾ ಭಾವನೆಗಳು
infinite loop ಆಯಿತೆ?

ಸದ್ಗುಣಗಳ inherit ಮಾಡಲು
ಎಲ್ಲರೊಂದಿಗೆ ಗುದ್ದಾಟ
ಖಾಲಿಯಾದ ಮನದೊಳಗೆ
garbage valueವಿನ ಕಾಟ

ನನ್ನ ಏಳ್ಗೆಗೆ ನಾನೇ ಬರೆವೆ
algorithm ಅನ್ನು
ಸಂಸ್ಕಾರದಿ compile ಮಾಡಿ
execute ಮಾಡುವೆ ಬದುಕೆಂಬ programಅನ್ನು..

ಬದಲಾದ ಚಂಚಲತೆಯ ಚಿಟ್ಟೆ....just for you..

ಹೀಗೆ ದಾರೀಲಿ walking ಹೊರಟಿದ್ದೆ.ಯಾಕೋ ತುಂಬಾ ನೆನಪಾದೆ ನೀನು..ಯಾಕಂತ ಗೊತ್ತಿಲ್ಲ.flashback ನಂಗೆ ಬೇಡ...past ಬಗ್ಗೆ ನೆನಪು ಮಾಡ್ಕೊಬಾರದು just present situations ನ enjoy ಮಾಡಬೇಕು ಅಂತ ಅನ್ಕೊಂಡಿದ್ದೆಲ್ಲ ಒಂದೇ ಕ್ಷಣದಲ್ಲಿ ಮಾಯ...ನಿಂಗೆ ಗೊತ್ತಲ್ವಾ ಮೊದ್ಲು ನಾ ಹೇಗಿದ್ದೆ ಅಂತಾ...ಎಲ್ಲರೂ ಒಳ್ಳೇವ್ರು ಅಂತಿದ್ದೆ.ಎಲ್ಲರನ್ನು ಮುಗ್ಧವಾಗಿ ನಂಬ್ತಿದ್ದೆ.ನಂಬೋದೇ ತಪ್ಪು ಅಂತಾ ಬದುಕು ಕಲಿಸ್ಬಿಡ್ತು.
'ಹೇಳಿ ಹೋಗು ಕಾರಣ' book ಓದಿ ನಾ ನಿಂಗೆ ಕೇಳಿದ್ದೆ ನೆನಪಿದ್ಯಾ? ಯಾರಾದ್ರೂ ಇಷ್ಟೆಲ್ಲಾ ಬದಲಾಗೋಕೆ ಸಾಧ್ಯಾನಾ ಅಂತಾ...ಆ ಕ್ಷಣದಲ್ಲಿ ನಂಬೋಕಾಗಿರ್ಲಿಲ್ಲ.but ಹೀಗೂ ಇರ್ತಾರೆ ಅನ್ನೋ ಸತ್ಯ ಈಗ ಗೊತ್ತಾಯ್ತು.ಎಂಥ ಪ್ರಪಂಚ ಇದು...ಮುಗ್ಧ ಮನಸ್ಸು ಅರಳೋ ಮುನ್ನನೇ ಕೊಂದುಬಿಡತ್ತೆ.ಸುಳ್ಳಿನ ಅರಮನೆ ಕಟ್ಟಿ ಸುಖವಾಗಿದ್ದಿಯಾ ನೀನು.ಸತ್ಯಾನೆ ನಂಬಿರೋ ಈ ಬಡಪಾಯಿ ಮಾತು comedy ಅನ್ಸತ್ತೇನೋ ಅಲ್ವಾ...ಯಾಕೋ ಬಿಟ್ಟು ಹೊದೋರ್ನೆಲ್ಲ ಪೂರ್ಣವಾಗಿ ದ್ವೇಷಿಸಬೇಕು ಅನಿಸಿದ್ದಂತು ನಿಜ..ಆದ್ರೆ ಅದೂ ಬರ್ದೇ ಒದ್ದಾಡೋ ಪರಿಸ್ಥಿತಿ ನಂದು.ವಂಚನೆ ಮಾಡಿದೋರ ಕಣ್ಣನ್ನ ಅದೇ ಮುಗ್ಧ ಪ್ರೀತಿ ಇಂದ ನೋಡಿದ್ರೆ ಎಂಥ ವಂಚಕರಿಗಾದ್ರು guilt ಕಾಡತ್ತಂತೆ.ನಂಗೆ ನಿನ್ನ ಆ guilt feel ಬೇಡ.ಮೊದಲು ತುತ್ತು ಮೊದಲ ಪ್ರಾರ್ಥನೆ ಎರಡೂ ನನ್ನ ಪ್ರೀತಿಪಾತ್ರರಿಗೆ ಅಂತ ಹೇಳ್ತಿದ್ದ ನಂಗೆ ಈಗ ಎರಡೂ ಬೇಡ ಅಂತಾ ಅನ್ನಿಸ್ತಿದೆ.ಸುಮ್ಮನೆ ಸದ್ದಿಲ್ಲದೇ ಬದಲಾದ್ಯಲ್ಲ ನಿಂಗೂ ಹಾಗೆ ಅನ್ನಿಸ್ತಾ ಇದ್ಯಾ?ಗೊತ್ತಿಲ್ಲ..ನೀನು ಹಾರೋ ಕನಸು ಕಂಡೆ.ಹಾರೋದಿಕ್ಕೆ ನಿನಗೆ ನನ್ನ ರೆಕ್ಕೆ ಕೊಟ್ಟೆ.ಹಾರೋದಿಕ್ಕೆ ಕಲಿಸಿದೆ.ನೀ ಹಾರ್ತಾ ಹೋಗ್ಬಿಟ್ಟೆ .ಆದ್ರೆ ನಾ ಇಲ್ಲೇ ಉಳಿದ್ಬಿಟ್ಟೆ sorry ನಾನೇನು ನಿಂಗೆ ಬೈತಿಲ್ಲ ನಂಗೊತ್ತು ನಿನ್ನ್ ಬದುಕು ನಿನ್ನ್ ಇಷ್ಟ.ನಾ ನಿಂಗೆ ಏನು ಅಲ್ವಾ?ನಾವು firends ಹಾಗೆ ಹೀಗೆ...ಕೊನೆವರ್ಗು ಹೀಗೆ friends ಅಂತೆಲ್ಲ ಹೇಳ್ತಿದ್ದ್ಯಲ್ಲ...ಹ್ಮ್ ಹೋಗ್ಲಿ ಬಿಡು...ಆದ್ರೆ ನೀ ನನ್ನ ಮತ್ತೆ ಭೇಟಿ ಅಗೊದಿರ್ಲಿ ನನ್ನ ನೋಡ್ಲೂಬೇಡ please...ಮೊದಲಾದ್ರೆ ಅ ನೋಟದಲ್ಲಿ ಪವಿತ್ರ ಸ್ನೇಹ ಇತ್ತು...ಈಗ... ವಂಚನೆಯ ಎರಡನೇ ಅಧ್ಯಾಯ ಅನ್ಸುತ್ತೆ ನಂಗೆ.ನಿನ್ನ ಬದಲಾದ ಬದುಕಲ್ಲಿ ಆ ವಂಚನೆಯ ಪಂಜರದ ಪುಟ್ಟ ಹಕ್ಕಿ ಆಗೋದು ನಂಗೆ ಇಷ್ಟ ಇಲ್ಲ...ಗೂಬೆ ತರಾ ಒಂಟಿ ಆಗಿ ಇದ್ದರು ಪರವಾಗಿಲ್ಲ...ಒಳಿತೋ ಕೆಡುಕೋ ಜೊತೆಲೇ ಇರೋ ಬಳ್ಳಿ ಬೇಕು...ನಿನ್ನಂತ ವಸಂತದ ಕೋಗಿಲೆ ಬೇಡ.ಎಲ್ಲೇ ಇದ್ರೂ ನೀ ನಗ್ತಾ ಇರು ನನ್ನ ಕಣ್ಣೀರು ಒರೆಸೋಕೆ try ಮಾಡಬೇಡ.ಒಂಟಿತನದ ಶಾಪ ನಿಂಗೆ ಅಂಟೀತು .ಏನೇನೋ ಮಾತಾಡಿದ್ನಾ...ಬದಲಾದ ನಿನ್ನಂತೋರು ಇಂತ ಮಾತು ಕೇಳಲೇಬೇಕು....ಹೀಗೆ ಯಾರನ್ನೂ ಕಳ್ಕೊಬೇಡ...ಹೋಗಿಬರ್ತೀನಿ..sorry..ಹೋಗ್ತೀನಿ.bye...

ನಮ್ಮ್ ಹಾಸ್ಟೆಲ್ ಜೀವನ

ಓದಿಗಾಗಿ ಕೆಲವೊಮ್ಮೆ ಹಾಸ್ಟೆಲ್ ವಾಸ ಅನಿವಾರ್ಯ....ಅಲ್ಲಿನ ಅನುಭವದ ಪುಟ್ಟ ಪರಿಚಯ ಇಲ್ಲಿದೆ...





ಬಣ್ಣ ಬಣ್ಣದ ಕನಸು
ಪಕ್ವವಾಗದ ಮನಸು
ಮನೆಯಿಂದ ನನ್ನನ್ನು
ಕಳುಹಿದಕೆ ಮುನಿಸು

ಮನೆಯವರು ಹೊರಟಾಗ
ಅವರತ್ತ ಕೈ ಬೀಸುವಾಗ
ಮನದೊಳಗೆ ಕೋಲಾಹಲ
ನಿರ್ಧಾರಗಳು ಚಂಚಲ

ಮುಸ್ಸಂಜೆಯಲಿ ಮನೆನೆನಪು
ಬೆಂಬಿಡದೆ ಕಾಡುತಿರೆ
ಮನದ ಭಾರಕೋ ಏನೋ
ಸೊಗಸಾದ ನಿದ್ರೆ

ಬೆಳಗೆದ್ದು ಕುಳಿತಾಗ
ಕಣ್ಣಂಚಲಿ ಕೆನೆಗಟ್ಟಿದ ನಿದ್ದೆ
ಅಯ್ಯಯ್ಯೋ ಹೊತ್ತಾಯ್ತೆಂದು
ತರಗತಿಗೆ ಓಡಿದ್ದೆ

ಕಾಲ ಕಳೆದಾ ಹಾಗೆ
ಗೆಳೆಯರಾ ದಂಡಾಯ್ತು
ಮೆಲ್ಲಮೆಲ್ಲನೆ
ಮನೆನೆನಪು ಮರೆಯಾಯ್ತು

ಸೇರದಾ ಊಟ
ಕೆಲವರಾ ಕಾಟ
ಇದ್ದರೂ ಕೂಡ
ಮುಗಿಯದು ನಮ್ಮ ತುಂಟಾಟ

ಒಂದು ತುತ್ತಿಗೆ
ಹತ್ತೆಂಟು ಕೈಗಳು
ಒಂಟಿಜೀವಕೆ ಜೊತೆಯಾದ
ಹಲವಾರು ಮನಗಳು

ದೂರವಿದ್ದರು ನಮಗೆ
ಇಲ್ಲಿಲ್ಲ ಚಿಂತೆ
ನಮ್ಮಂಥವರಿಗೆ
ಸ್ನೇಹಿತರೇ ಬದುಕಂತೆ

ಮುತ್ತಂಥ ಮುಜಾನೇ
ನೆನೆಪಲಿ ಕಳೆದಾ ಹಗಲು
ಹಸಿದು ಕಳೆದ ರಾತ್ರಿ
ಜೊತೆಗೆ ಮತ್ತದೇ ಹರಟೆ

ಹಣವಂತರು ನಾವಲ್ಲ
ಗುಣಕೇನು ಕಮ್ಮಿ ಇಲ್ಲ
ಧನವಿಲ್ಲದಿರೆ ಏಕೆ ಭೀತಿ
ನಮ್ಮ ನಡುವಿಹುದು ಮುಗ್ಧ ಪ್ರೀತಿ

ಇಲ್ಲಿ ನಮಗೆ ನಾವೇ ಎಲ್ಲ
ಬೇರೇನೂ ಬೇಕಿಲ್ಲ
‘ನಾನು ಒಂಟಿ’ ಎಂಬ ಬೇಸರವಿಲ್ಲ
‘ನಾವು’ ಎಂಬ ಖುಷಿ ಸಾಕಲ್ಲ....

Tuesday, July 27, 2010

ಸಾಕ್ಷಿ

ಎಳೆ ಮನಸಿನ ಹೊಂಗನಸಿಗೆ
ನಸುನಗುವಿನ ಸಾಕ್ಷಿ
ಬಿಸಿನೆತ್ತರ ಹಸಿಮನಸಿಗೆ
ಹುಸಿಮುನಿಸಿನ ಸಾಕ್ಷಿ

ಚೆಲ್ಲಾಟದ ಚೆಲ್ಲು ಮನಸಿಗೆ
ತುಂಟಾಟದ ಸಾಕ್ಷಿ
ಪ್ರೀತಿಸುವ ಪೆದ್ದು ಮನಸಿಗೆ
ಪಿಸುಮಾತಿನ ಸಾಕ್ಷಿ

ಛಲವಿರುವಾ ದೃಢಮನಸಿಗೆ
ಕಣ್ಹೊಳಪೇ ಸಾಕ್ಷಿ
ಸಾಧಿಸಿದ ದಿವ್ಯ ಮನಕೆ
ಧನ್ಯತೆಯೇ ಸಾಕ್ಷಿ

ಪೂಜಿಸುವಾ ಪೂಜ್ಯ ಮನಕೆ
ಪ್ರೌಢಿಮೆಯೇ ಸಾಕ್ಷಿ
ಏನೂ ಅರಿಯದ ಮುದ್ದು ಮನಕೆ
ಮುಗ್ಧತೆಯೇ ಸಾಕ್ಷಿ

ಪುಟ್ಟ ಹಣತೆ

ಜಗವ ಬೆಳಗುವ ಸೂರ್ಯ ನಾನಲ್ಲ
ಮನೆ ಮನವಬೆಳಗುವ ಪುಟ್ಟ ಹಣತೆ
ನನ್ನಿಂದ ಬೆಳಕ ಪಡೆವರು ಎಲ್ಲ
ಆದರೆ ಎನ್ನ ಆತ್ಮಕೆ ಬೆಳಕಿನ ಕೊರತೆ...

ದಿಟ್ಟಿಸಿ ನೋಡು ...
ಎನ್ನ ಮನದಂಗಳ ಕತ್ತಲು
ಆದರೂ ಜಗಕೆ ನಾ ಬೆಳಕಿನ ಬಟ್ಟಲು

ನನ್ನ ಜೀವವ ಉರಿಸಿ ಬೆಳಕ ತೋರುವೆ ನಿಮಗೆ
ನಿಮ್ಮ ಗುರಿಗೆ ನಾ ದಾರಿದೀಪ
ಎಂದೆಂದೂ ಹಿಂದಿರುಗಿ ನೋಡದಿರಿ ನನ್ನನು..
ಹೇಗೆ ನಾ ತೋರಲಿ ಈ ಸುಟ್ಟ ಬದುಕನ್ನು...

ಹೆಜ್ಜೆ....

ಮರಳಿನೊಳಗಿನ ಹೆಜ್ಜೆ
ಮರಳಿ ಬಾರದ ಕಡೆಗೆ
ಹೊರಟಿರುವೆ ಜಾಡು ಹುಡುಕಿ
ಮತ್ತೆ ಆ ಅಮೂರ್ತ ಗಮ್ಯದೆಡೆಗೆ

ಬದುಕ ಬಗೆಗಿನ ಬಯಕೆ
ಮರಳ ಮೇಲಿನ ಮರೀಚಿಕೆ
ಮನಸಿನೊಳಗಿನ ಮೋಹ..
ಅದುವೆ ತೀರದ ದಾಹ..

ಅಪ್ಪಳಿಸುತಿದೆ ಅಲ್ಲಿ ನೆನಪಿನಾ ಅಲೆಗಳು
ಅಬ್ಬರದ ಭೋರ್ಗರೆತಕೆ ತತ್ತರಿಪ ಕಿವಿಗಳು
ಆದರೂ ಏಕಿಷ್ಟು ಪ್ರೀತಿ ಆ ಏಕಾಂತದ ನಡಿಗೆ
ಜೊತೆ ಸಿಕ್ಕೀತು ಎಂಬ ಕಲ್ಪನೆಯೆಡೆಗೆ..
.
ಕಾದ ಮರಳಿನಲ್ಲಿ ಪಾದ ಬೇಯುತಿದೆ
ಕಳೆದುಹೋದವರ ಬಗೆಗೆ ಮನಸು ನೋಯುತ್ತಿದೆ
ಆವನಿಯ ಅಂತ್ಯ ಬಂದೀತೆ....
ಮರುಳಾದ ಮನವು ಮರಳು ಸೇರುವವರೆಗೂ
ಮರಳಿ ಬಾರದ ಕಡೆಗೆ ಈ ಪಯಣ...

Monday, July 26, 2010

ಅನಾಥೆ

ಅಚ್ಚಹಸಿರಿನ ಮುಚ್ಚು ಮರೆಯಲಿ
ಹುಚ್ಚು ಮಳೆಯು ಹೆಚ್ಚು ಬರಲು
ಬೆಚ್ಚಗಿದ್ದ ಹಕ್ಕಿ ಮರಿಯು
ಮನವ ಬಿಚ್ಚಿ ತೋರಿತು

ನಸುಕಿನಾ ಬೆಳಗಲ್ಲಿ
ಮಸುಕಾದವೇ ನೆನಪುಗಳು
ಉಸುಕಿನಾ ಗೂಡಲ್ಲಿ
ಹೊಸಕಿ ಹೋದವೇ ಕನಸುಗಳು

ಕಂಡೆ ನಾ ಕನಸುಗಳ
ಜಗವ ಕಾಣುವ ಮೊದಲು
ಹಾರುವಾ ಆಸೆಯು
ರೆಕ್ಕೆ ಬಲಿಯುವ ಮೊದಲು

ಬದುಕಲು ಬೇಕು ಛಲ
ಜೊತೆಗಿರಲಿ ಆತ್ಮಬಲ
ಎಂದು ಹೇಳಿದ್ದಳು ಮಾತು
ತಾಯಿಯು ಜೊತೆ ಕೂತು



ರಿಂಗಣಿಸುತಿವೆ ತಾಯಿಯ
ಆ ಪ್ರೀತಿಯ ನುಡಿಮುತ್ತು
ಏನ ಮಾಡಲಿ ನಾನು
ಅವಳಿಲ್ಲ ಈ ಹೊತ್ತು

ಎನ್ನುದರ ಪೋಷಣೆಗೆ
ಬಲಿಯಾಯಿತೆ ಮಾತೆಯ ಬಲ
ಸೇರಿದಳೆ ಭುವಿಯೊಡಲ
ನಾ ಹೇಗೆ ಮರೆಯಲೇ ಆ ಮಡಿಲ..

ಏನ ಮಾಡಿದರೇನೆ..ಗೆಳತಿ
ಯಾರು ಜೋತೆಗಿದ್ದರೇನೆ
ತಾಯಿಯಿಲ್ಲದ ಮೇಲೆ
ಅನಾಥೆ ತಾನೇ...

Sunday, July 25, 2010

ಅಮ್ಮಾ.....ಎಲ್ಲಿ ಹೋದೆ.....?

(ಅಮ್ಮನ ಕಳೆದುಕೊಂಡ ಮುಗ್ಧ ಮಗುವಿನ ತೊದಲು )


ಅಮ್ಮಾ...'ಅಮ್ಮ' ಅಂತಾರಾ ನಿಂಗೆ?ನಂಗೆ ಗೊತ್ತಿಲ್ಲ.ಅದ್ನೂ ನೀನೆ ಹೇಳಿಕೊಟ್ಟೆ...ನಿಜವಾಗಲೂ ಅನಿಸುತ್ತಿದೆ..ನಿನ್ ಹೊಟ್ಟೆಲಿ ನಾ ಬೆಳೆದಿದ್ದು ನನ್ನ ಪುಣ್ಯನೋ ನಿನ್ ಕರ್ಮನೋ ಗೊತಾಗ್ತಿಲ್ಲ..ಎಷ್ಟೊಂದು ಜವಾಬ್ದಾರಿ ನಿಂಗೆ..ಹುಟ್ಟಿಂದನೂ ಬರಿ ಕಷ್ಟ ಕಂಡಿದ್ದಂತೆ ನೀನು,ಅಲ್ವಾ?ಅಜ್ಜಿ ನಿನ್ನ್ ಹತ್ರ ಹೇಳಿದ್ದನ್ನ ನಾ ಕೇಳಿಸ್ಕೊಂಡೆ.ಏ ಬೈಬೇಡ ನಾನು ಆಗ ನಿನ್ನ ಹೊಟ್ಟೆಲಿದ್ದೆ.ಹ್ಮ್ಮ್ಮ್ ಗಂಡ ಮುಂಗೋಪಿ,ಮನೇಲಿ ಕಷ್ಠ,ಆದರೂ ನೀನ್ನು ಹೆಂಗೋ ಕಷ್ಟಪಟ್ಟು ಬದುಕನ್ನ ಕಟ್ಟಿದ್ದೆ.ಹರಿದು ಹೋದ ಬಾಳಿಗೆ ಗೊತ್ತಾಗದಷ್ಟು ನಾಜೂಕಾಗಿ ನಗುವಿನ ತೇಪೆ ಹಾಕಿದ್ದೆ...ನಾ ಹುಟ್ಟಿದಾಗನೂ ಅಷ್ಟೇ ಅಲ್ವಾ ಆ ದೇವ್ರು ನಂಗೆ ಅನ್ನೋದ್ಕಿಂತ ನಿಂಗೆ ಅನ್ಯಾಯ ಮಾಡಿದ್ದ.ನನ್ನಂತ ಬುಧ್ಧಿಮಾಂದ್ಯ ಮಗುನ ನಿನ್ನ ಮಡಿಲಿಗೆ ಹಾಕಿ....
ನೋವಾದ್ರೆ ಅಳಬೇಕು ಅಂತನೂ ಗೊತ್ತಾಗದ ಮಗು ನಾನು...ಆದ್ರೆ ಅಮ್ಮ ನಿನ್ನ ಕಣ್ಣಂಚಿನ ಕಣ್ಣೀರು ನಂಗೆ ಹಠ ಕಲ್ಸಿತ್ತು.ಕಷ್ಟಪಟ್ಟೆ.ನೀನ್ಯಾರು ಅಮ್ಮ ಅಮ್ಮ ಅಮ್ಮ...ಹತ್ತಲ್ಲ ನೂರಲ್ಲ ಸಾವಿರ ಸಾರಿ ನೆನಪಿಟ್ಟೆ....ಯಾಕಂದ್ರೆ ನಾ ನಿನ್ನ ಹಾಗೆ ಕರೆದರೆ ನೀ ನಗ್ತಿದ್ದೆ.ಅ ನಿನ್ನ ನಗುವಿನಲ್ಲಿ ನನ್ನ ಬದುಕಿನ ಬೆಳಕಿತ್ತು.....ಆದ್ರೆ....ಈಗ ಯಾಕಮ್ಮ ಮಂಕಾದೆ...?ಮಾತೂ ಆಡ್ತಿಲ್ಲ.ನೋವು ಕಳೆಯಲು ಹರಿಸಿದ ಕಣ್ಣೀರ ಜೊತೆ ಜೀವಜಲವೂ ಹರಿದುಹೋಯ್ತಾ?ದೊಡ್ದೊರೆಲ್ಲಾ ಏನೇನೋ ಹೇಳ್ತಿದಾರೆ.ನಾ ಪಾಪ ಅಂತೆ..ನೀ ಇರಬೇಕಾದ್ರೆ ನಾ ಯಾಕಮ್ಮ ಪಾಪ....ಅಮ್ಮ ಯಾಕಮ್ಮ ನಿನ್ನ್ ದೇಹ ತಣ್ಣಗಾಗಿಹೋಗಿದೆ?ನೀ ಯಾಕೆ ನನ್ನ ನೋಡ್ತಿಲ್ಲ?ನಿನಗ್ಯಾಕೆ ಪೂಜೆ ಮಾಡ್ತಿದಾರೆ?ಅಪ್ಪ ಹೇಳ್ತಿದಾರೆ ನೀ ದೇವ್ರ ಹತ್ರ ಹೊದ್ಯಂತೆ.....ನಂಗೆ ಏನೂ ಗೊತ್ತಾಗ್ತಿಲ್ಲ.....
ಈ ಭಾಗ್ಯಕ್ಕೆ ನಾನ್ಯಾಕೆ ಇಲ್ಲಿಗೆ ಬಂದೆ..ಹೌದು ನಾನ್ಯಾರು?

ಸ್ನೇಹಿತರು


ಸಂತಸದ ಕ್ಷಣಗಳು ಎಂದೂ ಹೀಗೆ ಇರಲಿ
ಬದುಕ ಬಂಗಾರದ ಪುಟವು ಕೊನೆಗಾಣದಿರಲಿ..
ನಮ್ಮ ನಗುವಿಗೆ ಕೊನೆಯೆಲ್ಲಿ?
ಕಾಣ್ವ ಕನಸುಗಳಿಗೆ ಮಿತಿಯೆಲ್ಲಿ?
ಗುಂಪುಗೂಡಿದರೆ ಸಾಕು ಮತ್ತಷ್ಟು ಕಲರವವು,
ನಮ್ಮ ನಲಿವಿಗೆ ಇಲ್ಲಿ ಬೇಕಿಲ್ಲ ಕಾರಣವು.
ಗಮ್ಯವದು ದೂರವಿರೆ ನಮಗಿಲ್ಲ ಚಿಂತೆ..
ದಾರಿ ಸವೆಸಲು ಇಹುದು ಈ ಗೆಳೆಯರಾ ಸಂತೆ.
'ನಾ ನಡೆಯಲಾರೆ' ಎಂದು ನೊಂದು ನುಡಿದರೆ..
ಬೆಚ್ಚಗಿನ ಸ್ಪರ್ಶವದು ಹೇಳುವುದು 'ನಾ ಇಹೆನಲ್ಲ ಇನ್ನೇನು ತೊಂದರೆ?'
ಕಣ್ಣಲ್ಲೇ ಕವನ ಬರೆವ ಮಾಂತ್ರಿಕರು ನಾವು,
ಸ್ನೇಹದಾ ಕಡಲಿನ ಪುಟಿದೇಳುವ ಅಲೆಗಳು ..

ಆಸರೆಯೇ?ಚಿಲುಮೆಗಳೇ? ಚಿಗುರುಗಳೇ?
ಭರವಸೆಯೇ.....
ನಾವ್ಯಾರು????
ನಾವು "ಸ್ನೇಹಿತರು"...
-ಸೌರಭಾ