Monday, February 28, 2011

ನನ್ನ್ ಗೆಳೆಯ....

'ಗೆಳತಿಯ ಬಗ್ಗೆ ನಿನ್ನ ಪುಸ್ತಕದಲ್ಲಿ ಕವನ ಇದೆ....ಗೆಳೆಯನ ಬಗ್ಗೆ ಬರೆದಿಲ್ಲ...ಇದು ಮೋಸ' ಎಂದು ಗೆಳೆಯನೊಬ್ಬ ಹೇಳಿದಾಗ ನಂಗೂ ಹೌದೆನ್ನಿಸ್ತು...so ಹೀಗೊಂದು ತರಲೆ try....


ಸುಮ್ನೆ ಹೋಗ್ತಿದ್ರೆ
ತಲೆಗೊಂದು ಮೊಟಕುವವ,
ಯಾರೆಂದು ತಿರುಗಿದರೆ..
ಮತ್ತೊಂದು ಮೊಟಕಿ 'ನಾನೇ ಕಣೇ'
ಎನ್ನುವ ತುಂಟ ನಗೆಯ ಗೆಳೆಯ.

ಬದುಕು-ಬೇಸರ ಅಂತೆಲ್ಲಾ
ವೇದಾಂತ ಹೇಳ್ತಿದ್ರೆ...
'ಮನೇಲಿ ಹೇಳಿಬಂದಿದ್ಯಾ??'ಅಂತ
ಮುಲಾಜಿಲ್ಲದೆ ಉಗಿತಾನಲ್ಲ..
ಅವನೇ ನನ್ನ ಗೆಳೆಯ.

ರುಚಿ ಇಲ್ಲದ ಊಟ
ಸೇರಲ್ಲ ಕಣೋ ಅಂದ್ರೆ..
ಇಂದು ತಾನೂ ಉಪವಾಸ
ಎಂದು ಬೆದರಿಸಿ ಉಣಿಸುವ
horrible ಗೆಳೆಯ...

ನಡುರಾತ್ರೀಲಿ call ಮಾಡಿ
'ಮಲಗಿದ್ಯೇನೆ?ಸರಿ ಬರ್ಲಾ...'
ಎಂದು ಮುಸಿ ಮುಸಿ ನಗುವ ತರಲೆ
ಆದರೂ sweet ಎನ್ನಿಸುವ ಗೆಳೆಯ

ಮನದಲಿದ್ದುದನೆಲ್ಲ
silly ಅನಿಸಿದರೂ ಸರಿಯೇ
ಸುಮ್ಮನೆ ಹೊರ ಹಾಕಿ
'ಕೇಳೋದು ನಿನ್ನ್ ಕರ್ಮ'ಎನ್ನುವ
ಮಗುವಿನಂಥಾ ಗೆಳೆಯ

ಅಮ್ಮನಂಥಾ ಗೆಳೆಯ
ಅಣ್ಣನಂಥಾ ಗೆಳೆಯ...
ಮನದ ಗೂಡಲ್ಲಿರುವ ಮುಗ್ಧ ಗೆಳೆಯ...
sorry...ಇವ ಇನಿಯನಲ್ಲ 'ನನ್ನ ಗೆಳೆಯ'

Saturday, February 26, 2011

ಅಪ್ಪನ ಹೆಜ್ಜೆ ಗುರುತು....

hi friends...ಚಿಕ್ಕೋರಿದ್ದಾಗ ಎಲ್ಲರಿಗೂ ಅಪ್ಪ ನೇ ಹೀರೋ..ಬೆಳೆಯುತ್ತಾ ಎಲ್ಲೋ ಒಮ್ಮೊಮ್ಮೆ ಅಪ್ಪನ ವಿಚಾರ ತಪ್ಪು ಎನ್ನಿಸುವುದೂ ಇದೆ...ಆದರೂ ಅಪ್ಪನ ಅನುಭವ ನಮಗೆ ಪಾಠ.ಹೀಗೆ ಅನುಭವ,ಕಲ್ಪನೆ ಎರಡನ್ನೂ ಜೊತೆಗೂಡಿಸಿ, ಗೀಚಿ ನಿಮ್ಮ ಮುಂದಿಟ್ಟಿದ್ದೇನೆ..ಹೇಗಿದೆ??ಓದಿ ಹೇಳಿ.

ಭುವನಾ ಇಳಿಸಂಜೆಯ ಹೊತ್ತಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಮುದ್ರದ ಅಂಚಲ್ಲಿ ಕುಳಿತಿದ್ದಳು....ಅದು ಆಕೆಗೆ ತುಂಬಾ ಇಷ್ಟವಾದ ಜಾಗ...ಅಲ್ಲಿರುವ ಮರಳ ಕಣಗಳಷ್ಟೇ ಮಧುರ ನೆನಪುಗಳು ಆ ತೀರದಲ್ಲಿ ಅಡಗಿ ಕುಳಿತಿವೆ...ಆಗೊಮ್ಮೆ ಈಗೊಮ್ಮೆ ಕಣ್ಣೀರ ಹನಿಯೂ ಆ ಮರಳಿನಲ್ಲಿ ಇಂಗಿದ್ದಿದೆ.ಒಟ್ಟಿನಲ್ಲಿ ಆ ತೀರಕ್ಕೂ ಆಕೆಗೂ ಅವಿನಾಭಾವ ಸಂಬಂಧ.ಜೊತೆಯಲ್ಲಿ ಯಾರಾದರೂ ಇದ್ದರೆ ಅಲೆಗಳ ಜೊತೆ ಚೆಲ್ಲಾಟ,ಇಲ್ಲವಾದರೆ ಹಾಗೇ ಸುಮ್ಮನೆ ಅವುಗಳನ್ನ ನೋಡುತ್ತಾ ಕಾಲ ಕಳೆಯುವುದು ಅವಳಿಗೆ ಅಚ್ಚುಮೆಚ್ಚು.ಆ ದಿನವೂ ಹಾಗೇ...ಸುಮ್ಮನೆ ಮರಳ ಮೇಲೆ ಕುಳಿತಿದ್ದಳು,ಅಂಟಿಕೊಂಡು ಹೆಜ್ಜೆಹಾಕುತ್ತಿದ್ದ ಪ್ರೇಮಿಗಳು,ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಜನರು..ಮರಳಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳು...ಹೀಗೆ ಎಲ್ಲರ ಕಡೆಗೆ ತನ್ನ ನೋಟ ಬೀರಿದಳು..ಅವಳ ನೋಟವನ್ನು ಸೆಳೆದಿದ್ದು ಒಂದು ಪುಟಾಣಿ ಮಗು,ಅದು ತನ್ನ ಅಪ್ಪನ ಹಿಂದೆ ನಡೆಯುತ್ತಿತ್ತು,ಆ ಪುಟ್ಟ ಪುಟ್ಟ ಕಾಲುಗಳಿಂದ ಹೆಜ್ಜೆಯಿದುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಪ್ಪನ ಹೆಜ್ಜೆಗುರುತಿನ ಮೇಲೆ ತನ್ನ ಹೆಜ್ಜೆಯನ್ನು ಇಡಲು ಹರಸಾಹಸಪಡುತ್ತಿತ್ತು.ಆ ದೃಶ್ಯ ಅವಳನ್ನು ಹಳೆಯ ದಿನಗಳಿಗೆ ಎಳೆದುಕೊಂಡು ಹೋಯ್ತು....'ನಾನೂ ಹೀಗೆ ಅಪ್ಪನ ಹಿಂದೆ ನಡೆಯುತ್ತಿದ್ದೆ...ಆ ಹೆಜ್ಜೆಗಳ ಮೇಲೆ ಹೆಜ್ಜೆ ಇಡಲು ಕಷ್ಟಪಡುತ್ತಿದ್ದೆ...ಬಿದ್ದರೂ ಸರಿಯೇ ಮತ್ತೆ ಅದೇ ಯತ್ನ,ಅಪ್ಪ ಹಲವು ಬಾರಿ ನಗುತ್ತಿದ್ದರು.ಅಮ್ಮ ಹೇಳುವುದಿತ್ತು 'ಅಪ್ಪನ ಪಡಿ ಅಚ್ಚು ಈ ಕೂಸು,ಅನ್ಸಿದ್ದನ್ನ ಮಾಡೋವರೆಗೂ ಬಿಡಲ್ಲ'ಅಂತ, ಅವರು ಹೇಳಿದ್ದರಲ್ಲಿ ಅತಿಶಯ ಏನಿರಲಿಲ್ಲ,ನನ್ನಪ್ಪ ನಂಗೆ ತುಂಬಾ ಇಷ್ಟ.ಮಿತವಾದ ಮಾತು ಹಿತವೆನಿಸುವ ನಡೆ,ತನ್ನ ಆದರ್ಶದಂತೆ ಬದುಕುತ್ತಿದ್ದ ಅವರು ಎಂದಿಗೂ ಅವುಗಳನ್ನೂ ನಮ್ಮ ಮೇಲೆ ಹೊರಿಸಿದ್ದಿಲ್ಲ.ಪ್ರತಿಯೊಂದಕ್ಕೂ ಸಲಹೆ ಮಾತ್ರ ಅವರದ್ದು ಆಯ್ಕೆ ಮಾತ್ರ ನನ್ನದೇ...ಮಗಳ ಆಯ್ಕೆ ತಪ್ಪಿರಬಹುದೇ? ಎಂಬ ಕಿಂಚಿತ್ ಶಂಕೆಯೂ ಇರುತ್ತಿರಲಿಲ್ಲ.ನನ್ನ ಬೆಳೆಸಿದ ರೀತಿಯಲ್ಲಿ ಅಪ್ಪನಿಗೆ ಅಚಲವಾದ ವಿಶ್ವಾಸ.ಅವರ ಜೀವನ ಶೈಲಿ ತುಂಬಾ ಸರಳ,ಅಪ್ಪಾ ಹೊಸ ಬಟ್ಟೆ ತಗೋ ಇದು ಹಳೆಯದಾಯ್ತು ಅಂದ್ರೆ ‘ನಮ್ಮ ವ್ಯಕ್ತಿತ್ವದಿಂದ ಗೌರವ ಸಿಗಬೇಕೇ ಹೊರತು ಬಟ್ಟೆ,ಅಲಂಕಾರಗಳಿಂದಲ್ಲ.’ಎನ್ನುವ ಉತ್ತರ.!!ಗೊಡ್ಡು ಸಂಪ್ರದಾಯವನ್ನು ಎಂದಿಗೂ ಒಪ್ಪುತ್ತಿರಲಿಲ್ಲ.ಸತ್ಯ,ಪ್ರಾಮಾಣಿಕತೆ ಬದುಕಿನ ಆಧಾರಸ್ತಂಭಗಳು ಎಂದು ನಂಬಿದ್ದವರು...ಅಪ್ಪನ ಬಗ್ಗೆ ಎಷ್ಟು ಹೇಳಿದರೂ ಸಾಲದು.ಹರೆಯದಲ್ಲಿ ಕೆಲವು ಬಾರಿ ಅಪ್ಪನ ವಿಚಾರಧಾರೆ ಸರಿಯಾಗಿ ಅರ್ಥವಾಗದೆ ಅಲ್ಲೋ ಇಲ್ಲೋ ಒಮ್ಮೆ ದಾರಿ ಬದಲಿಸಲೇ ಎಂದು ಬುದ್ದಿ ಮನಸನ್ನು ಕೇಳಿದ್ದಿದೆ..ಆದರೆ ಮನಸು ಮಾತ್ರ ಅಪ್ಪನ ದಾರಿಯನ್ನು ಬಿಡಲು ಒಪ್ಪಲೇ ಇಲ್ಲ...ಮನಸಿನ ಮಾತನ್ನ ಕೆಳುವವಳು ನಾನು ಅದಕ್ಕೆ ಅಪ್ಪನ ದಾರಿಯಲ್ಲೇ ನಡೆದೆ.ಕಳೆದುಹೋದವರ ಬಗ್ಗೆ ಬೇಜಾರಿದೆ,ಆದರೆ ಜೋತೆಯಿರುವವರೆಲ್ಲಾ ಎಂದಿಗೂ ಕೈ ಬಿಡದವರು.ಇದೆಲ್ಲಾ ಅಪ್ಪನ ಆದರ್ಶಗಳನ್ನು ನಾ ಇಷ್ಟಪಟ್ಟು ಮೈಗೂಡಿಸಿಕೊಂದಿದ್ದಕ್ಕೆ.ಅದರಲ್ಲೂ ನನ್ನ ಸ್ವಂತಿಕೆ ಇರುವಂತೆ ನನ್ನ ಬದುಕನ್ನ ರೂಪಿಸಿಕೊಳ್ಳುವ ಅವಕಾಶ ಕೊಟ್ಟಿದ್ದು ಈ ನನ್ನಪ್ಪ....ಹೊತ್ತು ಮುಳುಗುತ್ತಿದ್ದಂತೆ ರಭಸಗೊಂಡ ಅಲೆಗಳಂತೆ ಅಪ್ಪನ ಮೇಲಿನ ಅಭಿಮಾನ ಹೆಚ್ಚಾಗುತ್ತಲೇ ಇತ್ತು..ಸಮಯದ ಅರಿವಿಲ್ಲದೆ ಯೋಚನಾ ಲಹರಿಯಲ್ಲಿ ಇದ್ದ ಅವಳು ವಾಸ್ತವಕ್ಕೆ ಬಂದದ್ದು ಅಪ್ಪ ಬಂದು 'ಮಗಳೆ ಬಾ ಮನೆಗೆ ಹೋಗೋಣ ಅಮ್ಮ ಕಾಯ್ತಾ ಇರ್ತಾಳೆ ಎಂದಾಗ..'ಮತ್ತೆ ಅಪ್ಪನ ಹೆಜ್ಜೆಯ ಮೇಲೆ ತನ್ನ ಹೆಜ್ಜೆ ಇಡುತ್ತಾ ಮನೆಯ ದಾರಿ ಹಿಡಿದಳು.