Monday, December 24, 2012

ಬಿಟ್ಟು ಬಂದೆ


ಪ್ರತಿ ಹೆಜ್ಜೆಗೂ ಅಸಾಧ್ಯ ನೋವು
ಇನ್ನೊಂದು ಹೆಜ್ಜೆ ಇಡಲಾರೆ ಎಂಬಷ್ಟು
ಆದರೂ ನಡೆಯಲೇಬೇಕಾದ ಕರ್ಮ
ಬದುಕಿನ ಬಂಡಿ ಹಾಗೆಯೇ...

ಹುಡುಕಿದರೆ
ನಿಜ ಸ್ವರೂಪ ಕಾಣದಷ್ಟು ತೇಪೆ
ಅದೇ ಚರಪರ ಸದ್ದು
ಆತ್ಮೀಯವಾಗಿಬಿಟ್ಟಿದೆ....
ನೋವಲ್ಲ...ಶಬ್ದ

ಅವಳ ನೋಡು..
ಅವಳಿಗೆಷ್ಟು ಸುಖ
ದಿನಕ್ಕೊಂದು ಬಣ್ಣ
ನೊವಿನ ನರಳಿಕೆಯೇ ಇಲ್ಲ

ಆದರೂ ನಾ ಅವಳಲ್ಲ...

ಇದ್ದುದರೊಂದಿಗೇ ಒದ್ದಾಡಿದೆ
ಗಾಯ ಮಾಯುವವರೆಗೆ ಕಾದೆ
ಕಲೆ ಉಳಿಯಿತು...ಮತ್ತೆ ಮತ್ತೆ ಗಾಯ...
ತುಟಿ ಕಚ್ಚಿ ಮುನ್ನಡೆದೆ
ಆಗಲೇ ಇಲ್ಲ...

ಕ್ಷಣದಲ್ಲೇ ಆಯಿತು ಜ್ಞಾನೋದಯ
ಬೋಧಿ ವೃಕ್ಷ ಇರಲಿಲ್ಲ
ಬದುಕಿತ್ತು.....
ಸಾಕಲ್ಲ ಅಷ್ಟು..
ಹುಟ್ಟಿಂದ ಏನು ಇದರ ಜೊತೆಯೇ ಇದ್ದೆನೇ?
ಇಲ್ಲವಲ್ಲ...
ಬಿಟ್ಟು ಬಂದೆ....


Monday, March 5, 2012

ಗೋರಿಗಳೊಂದಿಗಿನ ಬದುಕು


ಹುಟ್ಟಿದವ ಒಮ್ಮೆಯಾದರೂ ಇಲ್ಲಿ ಬರಲೇಬೇಕು
ಬದುಕು ಮುಗಿದಾಗಲೋ..ಬದುಕು ಮುಗಿಸಿದವರ ಕಳುಹಲೋ...
ನನ್ನದೇನೋ ಕರ್ಮ ನಾ ಬದುಕು ಕಂಡಿದ್ದಿಲ್ಲಿ..
ಸತ್ಯವನೆ ನಂಬಿದವನ ಕರ್ಮಭೂಮಿಯಾಗಿತ್ತಿದು
ನನಗೂ ಅದೇ ರೂಢಿ...
ಸುಳ್ಳಿಂದ ಆಗಬೇಕಾದ್ದೇನು??
ಇಲ್ಲಿ ಕ್ಷಣಕ್ಕೊಂದು ಸಾವು, ಸಾವಿಗೊಂದು ಕಾರಣ
ಕ್ಷಣದಲ್ಲೇ ಬಿಡುಗಡೆ ಎಲ್ಲ ಬಂಧಗಳಿಂದ
ಬದುಕಿದ್ದ ಮೂರು ಕ್ಷಣ ಮಾಡಿದ್ದೊಂದೇ ಸತ್ಯ
ತಪ್ಪದ ಸಾವು ಒಬ್ಬರಿಗೊಂದು ತರ
ಅಸ್ತಿತ್ವವ ಕಳೆವುದದು....
ಹೆಸರಿಗಸ್ತಿತ್ವವ ಕೊಡುವುದದು...
ಯಾರನ್ನೂ ಬಿಡದ ಮಾಯೆಯದು
ಇನ್ಯಾರಿಗಿದೆ ಎಲ್ಲರನ್ನೆಳೆದು ತಂದು ತಣ್ಣನೆ ಮಲಗಿಸುವ ಜಾಣ್ಮೆ...
ಜಗದ ಸದ್ದಿಗೆ ಇಲ್ಲಿಲ್ಲ ಬೆಲೆ
ಅಬ್ಬರ ಆರ್ಭಟಗಳೆಲ್ಲ ಗೋರಿ ಮೇಲಿನ ಚಿತ್ರ..
ಆದರೆ ಎಲ್ಲ ಮೀರಿ ಹೊರಟವ ಹೊದ್ದಿಹನು ಭೂತಾಯಿಯ ಸೆರಗ
ಯಾರ ಮುದ್ದಿನ ಕೂಸೋ...ಯಾರ ಹೆತ್ತವರೋ....
ಯಾರ ಬಂಧುಗಳೋ....
ನನಗೆ ಮಾತ್ರ ಜೀವವಿಲ್ಲದ ದೇಹ.....
ಅವರ ಭಾವಗಳು ಅವರಿಗೆ...
ನನಗೋ ಕೊನೆಯಾದ ಬದುಕಿನ ಭಾವ ಹುಡುಕುವ ಹುಚ್ಚು
ಹುಟ್ಟು ಸಾವಿನ ನಡುವೆ ಬದುಕು...
ನನ್ನದು...ಸಾವುಗಳ ನಡುವೆ ಬದುಕು!!!
ದಿನವೂ ಅದೇ ಕೆಲಸ  ಎಂಬ ಬೇಸರ ಕೆಲವೊಮ್ಮೆ...
ಆದರೂ....
ಸತ್ತ ಸಂಬಂಧಗಳ ಜತೆಯ ಬದುಕಿಗಿಂತ....
ನನಗೇನೋ ಗೋರಿಗಳ ಜತೆಗಿನ ಬದುಕೇ ಸುಂದರ.