ಮನಸಲ್ಲಿ ಮೂಡುವ ನೂರಾರು ಯೋಚನೆ ಕಲ್ಪನೆ ನೋವು ನಲಿವು ಕನಸು ಮುನಿಸು ಪ್ರೀತಿ...ಎಲ್ಲವನ್ನೂ ಗೀಚುವ ಪುಟ್ಟ ಪ್ರಯತ್ನ...
Tuesday, January 4, 2011
ಮೆಚ್ಚಿನ ಗೆಳೆಯನಿಗೊಂದು ಪತ್ರ..
ನಿನ್ನ ನೆನಪು ಅಂತೆಲ್ಲಾ ನಂಗೆ ಕಾಡಿದ್ದೇ ಇಲ್ಲ...ಯಾಕಂದ್ರೆ ನೆನಪಾಗಿ ಕಾಡೋಷ್ಟು ದೂರ ನಾವು ಯಾವತ್ತೂ ಇರಲೇ ಇಲ್ಲ...ಅಲ್ವಾ...ಇಡೀ ದಿನ msgಲಿ ತಲೆತಿನ್ನೋದು ಇದ್ದಿದ್ದೇ...ನಾ ನಿನ್ನ ಕಾಲೆಳೆಯೋದು,ನೀನೇನು ಕಮ್ಮಿ ಇಲ್ಲ ಬಿಡು..ಈಗೀಗ ನೀ ಅಪರೂಪ ಆಗಿದ್ದಕ್ಕೆ ನಿನ್ನ ನೆನಪು ಕಾಡೋದು ಜಾಸ್ತಿ ಆಗಿದೆ ಅನ್ನಿಸ್ತಾ ಇದೆ ಕಣೋ.
ಭಾವನೆಗಳನ್ನ ಹೇಳೋಕೆ ಮಾತು ಬೇಕು ಅಂತಿಲ್ಲ ಬರೀ blank message ಕೂಡ ಸಾಕಾಗಿತ್ತು ನಮ್ಗೆ,ಅದು ಹೇಗೆ ಅರ್ಥ ಮಾಡಿಕೊಂಡ್ವಿ ಅದು ಹೇಗೆ ಇಷ್ಟು ಒಳ್ಳೆ ಸ್ನೇಹಿತರಾದ್ವಿ ಅನ್ನೋದು ನಮಗೆ ಇನ್ನೂ ಕಾಡೋ ಪ್ರಶ್ನೆ ಅಲ್ವಾ...ಉತ್ತರ ಸಿಗಲ್ಲ ಅನ್ಸತ್ತೆ ಅದ್ಕೆ...ಆದ್ರೆ ನೀನು ನನ್ನ ಸ್ನೇಹಿತ ಅಂತ ಅನ್ನೋದಕ್ಕಿಂತ a special person ಕಣೋ..city bus ಲಿ foot board ಲಿ ನಿಂತಿದ್ದನ್ನ ನೋಡಿ ಗದರಿದ್ಯಲ್ಲಾ ಆಗ ಮತ್ತೆ ‘ಸಂಜೆ last bus ಗೆ ಹೊರಟಿದಿಯಲ್ಲಾ ನಿಂಗೇನ್ ಹುಚ್ಚಾ’ ಅಂತ ರೇಗಿದ್ದು ಇದೆಲ್ಲ ಥೇಟ್ ಅಣ್ಣನ ತರ,ಒಮ್ಮೆ ನನ್ನ ಅಣ್ಣ ಬರ್ತಾನೆ ಅಂತ ಹೇಳಿ ಶಿವಮೂರ್ತಿ ಸರ್ಕಲ್ ಲಿ ಕಾಯ್ತಿದ್ದೆ.ಆಗ ಒಬ್ಬಳೇ ನಿಲ್ಲಬೇಡ ಅಂದೋನು ಮರುಕ್ಷಣದಲ್ಲೇ ಅಲ್ಲಿಗೆ ಪ್ರತ್ಯಕ್ಷ ಆಗ್ಬಿಟ್ಟಿದ್ಯಲ್ಲಾ ಅದೆಷ್ಟು caring ನೀನು....ನೀ ಹುಡುಗ ನಾ ಹುಡುಗಿ ಅನ್ನೋ ಗೆರೆ ನಮ್ಮ ಗೆಳೆತನದಲ್ಲಿ ಇಲ್ವೆಇಲ್ಲ...ಬರೋದೂ ಬೇಡ ಬಿಡು.ಒಮ್ಮೆ ನೀ ನನ್ನ fav. colour t-shirt ಹಾಕ್ಕೊಂಡ್ ಬಂದಿದ್ದೆ ಆಗ ನಾ ನಿನ್ನ್ ಹತ್ತಿರ ಬಂದು ‘ಸಕತ್ತಾಗ್ ಕಾಣ್ತಿದಿಯಾ ಮಾರಾಯ ಏನು ಯಾರಿಗೆ ಕಾಳು ಹಾಕೋಕೆ ಈ ವೇಷ??’ಎಂದು ಕಣ್ಣು ಮಿಟುಕಿಸಿ ಬಂದಿದ್ದೆ ನೆನಪಿದ್ಯಾ?ಅದನ್ನ ನೋಡಿ ನನ್ನ ಫ್ರೆಂಡ್ ಸಿಕ್ಕಾಪಟ್ಟೆ ಗಾಬರಿ ಆಗೋಗಿದ್ಲು ‘ಏನೇ ಇದು?ಅವ್ನು ಏನನ್ಕೊತಾನೆ ಅಂತ ಯೋಚ್ನೇನು ಮಾಡ್ದೆ ಹಾಗೆಲ್ಲ ಹೇಳಿ ಬಂದಿದ್ದೀಯಲ್ಲ ತಾಯಿ’ ಅಂತ ನನ್ನ ತರಾಟೆಗೆ ತಗೊಂಡ್ಲು.ಅದ್ರಲ್ಲೇನಿದ್ಯೇ ನಿಂಗೂ ಹಾಗೇ ರೇಗ್ಸ್ತೀನಿ ತಾನೇ?ಹಾಗೇ ಇವನಿಗೂ, ಫ್ರೆಂಡ್ಸ್ ಎಲ್ಲಾರೂ ಒಂದೇ ಅದರಲ್ಲಿ ಹುಡುಗ ಹುಡುಗಿ ಅಂತೆಲ್ಲ ಬೇರೆ ಮಾಡಿ ಮಾತಾಡೋಕೆ ಬರಲ್ಲ ಅಂದಿದ್ದೆ ಕಣೋ.ನೀನಂತೂ ಏನೂ ಅಂದುಕೊಳಲ್ಲ ಅನ್ನೋ ನಂಬಿಕೆ ಇತ್ತಲ್ಲ ನಂಗೆ..ಬಿಟ್ಟಿ ಡೈಲಾಗ್ ಹೇಳೋಕೆ ನನಗೇನು ಹೇಳು?
ಮೊನ್ನೆ friend ಜೊತೆ ಮಥುರಾ ಹತ್ತಿರ ಬಂದಿದ್ದೆ..ಅವಳಿಗೆ ಏನೋ ಕೆಲಸ ಇತ್ತು ಅಂತ...ಅಲ್ಲಿ ಪಾರ್ಕಲ್ಲಿ ನಾವು ಯಾವಾಗ್ಲೂ ಕೂತು ಕಥೆ ಹೇಳ್ತಿದ್ದ ಜಾಗ ನೋಡಿ ಯಾಕೋ ಅಳುವೇ ಬಂತು ಕಣೋ.
ಅಲ್ಲೇ ಅಲ್ವಾ ನಾವಿಬ್ರು ಮಾತಾಡ್ತಿದ್ದಿದ್ದು..ಅಲ್ಲೇ ಅಲ್ವಾ...’my autograph’ ನ ಶಂಕರ್-ದಿವ್ಯಾ ನ ನಾವು ಮೀರಿಸಬೇಕು ಅಂತೆಲ್ಲಾ ಮಾತಾಡಿದ್ದು..ಎಲ್ಲದಕ್ಕಿಂತ ಅಲ್ಲೇ ಅಲ್ವಾ ನಾವು ಮೊದಲು ಮನಬಿಚ್ಚಿ ಮಾತಾಡಿದ್ದು...ಅವತ್ತಿಂದ ಅದು ನಮ್ಮ fav. place ಆಗಿಹೋಯ್ತು .ಬೇಜಾರಾದ ತಕ್ಷಣ ನಾ ಅಲ್ಲಿ ಬರ್ತಿದ್ದೆ.ಆಗೆಲ್ಲ ಬಂದು ನಂಗೆ ಸಾಥ್ ಕೊಡ್ತಿದ್ದ ಕೋತಿ ನೀನು.ಅಲ್ಲಿ ಕೂತ್ಕೊಂಡು ಮಾತಾಡ್ತಾ ನಾ ಯಾಕೆ ಬೇಜಾರಾಗಿದ್ದೆ ಅನ್ನೋದನ್ನೇ ಮರೆಯೋ ಹಾಗೇ ಮಾಡ್ತಿದ್ದೆ ನೀನು.ಆಮೇಲೆ ಅಲ್ಲೇ ಕೂತ್ಕೊಂಡು ಕಡ್ಲೆಕಾಯಿ ತಿಂದು ಅಲ್ಲಿಗೆ ಬರೋ ಹುಡುಗಿರ್ನೆಲ್ಲಾ ತೋರ್ಸಿ ಇವ್ಳು ನನ್ನ ಅತ್ತಿಗೆ ಅಂತೆಲ್ಲ ನಿನ್ನ ಕಿವಿಲಿ ಪಿಸುಗುಡ್ತಾ..ನಿನ್ನ ಮುಖ ಕೆಂಪಾಗಿ ನೀ ನಂಗೆ ಬಯ್ಯೋವರೆಗೂ ಇದು ನಡೀತಿತ್ತು.ನಿಂಗೆ ಕೋಪ ಬಂದಿದ್ದು ಗೊತ್ತಾದರೂ ಯೇ ಹೋಗ್ಲಿ ಬಿಡೋ ಅದಕ್ಕ್ಯಾಕೆ ಅಷ್ಟು ನಾಚಿಕೆ ಅಂತ ನಾ ಮತ್ತೆ ಹೇಳೋದು ಇದು ನಮಗೆ ಮಾಮೂಲು....
ಇವತ್ತಿಗೂ ನಿನ್ನಮೇಲೆ ನಂಗೆ ಬೇಜಾರಿಲ್ಲ ಕಣೋ.ಮೊನ್ನೆ ನಂಗೆ ಬೇಜಾರಾಗ್ತಿದೆ ಅಂತ ಹೇಳಿದಾಗ 'ಸರಿ ಹಾಗಾದ್ರೆ ನಾಳೆ ಮಾತಾಡ್ತೀನಿ' ಅಂತ ಸುಮ್ಮನಾದೆ ನೋಡು ಆಗ ನಂಗೆ doubt ಆಗಿದ್ದು ಇವನೇನಾ ನಂಗೆ ಬೇಜಾರು ಅಂದಿದ್ದಕ್ಕೆ ತಕ್ಷಣ ನೆಹರೂ ಸ್ಟೇಡಿಯಂ ಗೆ ಓಡಿ ಬಂದಿದ್ದು ಇವನೇನಾ ಸಂಜೆ ಆದರೂ ನನ್ನ ಹಾಸ್ಟೆಲ್ಗೆ ಬಿಟ್ಟು ಮತ್ತೆ ವಾಪಾಸ್ ಹೋದ ಗೆಳೆಯ ಅಂತ ಅನುಮಾನ ಬಂತು ಕಣೋ...ಈಗೀಗ ಮಾತಾಡೋದು ಕಡಿಮೆ ಆಗೋಗಿದೆ.message ಮಾಡೋದು ಯಾಕೋ ಕಮ್ಮಿ ಅಂತ ಕೇಳಿದ್ರೆ message ಮಾಡಿಲ್ಲ ಅಂದ್ರೆ ಮರ್ತಿದಿನಿ ಅಂತ ಅರ್ಥನಾ?ಅಂತ ಕೇಳಿದ್ದೆ ನೀನು.ಅರ್ಥ ಅದಲ್ಲ ಆದ್ರೆ 24x7 chatting ಲಿ busy ಇರ್ತಿದ್ದ ನಾವು ಈಗ ಅಲ್ಲೋ ಇಲ್ಲೋ ಅಪರೂಪಕ್ಕೆ chat ಮಾಡ್ತೀವಿ ಅದಕ್ಕೆ ಬೇಜಾರು ನಂಗೆ.ಕಾರಣ ಕೇಳೋಕೆ ನಂಗೆ ಮನಸಾಗ್ತಿಲ್ಲ ನಿಂಗೆ ಹೇಳ್ಬೇಕು ಅನ್ನಿಸಿದಾಗ ಹೇಳು.ಈ ಪತ್ರ ನೋಡಿ ನಿಂಗೆ ನಗು ಬರಬಹುದು.
ನಕ್ಕುಬಿಡು...ಮತ್ತೆ ಮೊದಲಿನಂತಾಗು ಪ್ಲೀಸ್....
-sweety
`
Monday, November 8, 2010
ಛಿದ್ರಗೊಂಡ ಬದುಕು...

Monday, September 27, 2010
ನಿನಗಿನ್ನೇನ ಹೇಳಲಿ ....
ನಾ ಭುವಿಗೆ ಬರುವ ದಿನಕೆ
ನೀ ಕಾದಿದ್ದೆ ಕ್ಷಣ ಕ್ಷಣ
ಪ್ರತಿ ಸ್ಪರ್ಶವ ಆಸ್ವಾದಿಸಿ
ನಲಿದಿತ್ತು ನಿನ್ನ ಮನ..
ಹೇಳಲಾರದ ಭಾವ
ಮುರಿಯಲಾರದ ಬಂಧ...
ನಿನಗಿನ್ನೇನ ಹೇಳಲಿ
ಅಮ್ಮಾ ಎಂದಲ್ಲದೆ
ಮೊದಲ ಮುತ್ತು
ಮೊದಲ ತುತ್ತು
ಮೊದಲ ಪೆಟ್ಟು
ಎಲ್ಲ ಮೊದಲುಗಳ ಮೊದಲು..
ನೀನೆ ತಾನೇ
ನಿನಗಿನ್ನೇನ ಹೇಳಲಿ ಅಮ್ಮಾ ಎಂದಲ್ಲದೆ...
ನನ್ನ ನೋವಿಗೆ
ನಿನ್ನ ಸ್ಪಂದನೆ
ನನ್ನ ಏಳ್ಗೆಗೆ ಪ್ರತಿಕ್ಷಣವು ಚಿಂತನೆ
ನನಗೆ ಎಲ್ಲವು ನೀನೇ ತಾನೇ
ನಿನಗಿನ್ನೇನ ಹೇಳಲಿ
ನಡೆಯ ಕಲಿಸಿ
ನುಡಿಯ ಕಲಿಸಿ
ಬೊಗಸೆ ಕಂಗಳ ಕನಸು..
ನನಗೆ ಕೇಳದೆ ನನಸು ಮಾಡಿದವಳು..
ನೀನೇ ತಾನೇ..
ನಿನಗಿನ್ನೇನ ಹೇಳಲಿ ಅಮ್ಮಾ ಎಂದಲ್ಲದೆ
ನನ್ನುಸಿರಿನ ಮೊದಲಿಂದ
ನಿನ್ನುಸಿರ ಕೊನೆಯವರೆಗೂ
ನನಗಾಗಿ ಬದುಕುವವಳು
ನೀನೇ ತಾನೇ
ನಿನಗಿನ್ನೇನ ಹೇಳಲಿ
Wednesday, September 8, 2010
ಒಮ್ಮೆ ಯೋಚಿಸು...

ಒಮ್ಮೆ ಯೋಚಿಸು ನೀ
ಗೀಚುವಾ ಮುನ್ನ
ಗೀಚಿದ ಗೆರೆಯಳಿಸಿದರೂ
ಅಚ್ಚು ಉಳಿದುಹೋಗುವುದು
ಮತ್ತೆ ತಿದ್ದಲು ಹೋದರೆ
ಗಾಯವಾಗುವುದು
ಹಸಿಮಣ್ಣಿನ ನೆಲದಿ ಇಟ್ಟ
ಹೆಜ್ಜೆಯಂತೆ ಇದುವೆ...
ಒಮ್ಮೆ ಮೂಡಿದ ಗುರುತು
ಉಳಿದುಹೋಗುವುದು
ಬದುಕ ಹಾಳೆಯಲಿ
ನೂರಾರು ಬರಹಗಳು
ಒಬ್ಬೊಬ್ಬರದ್ದು
ಒಂದೊಂದು ಶೈಲಿ
ಮರೆಯದಿರು ನೀನು
ಪ್ರತಿ ಬರಹವು ಭಿನ್ನ
ಹೇಗೆ ತಾನೇ ಮರೆಯಲಿ
ನಿನ್ನ ಆ ಕೈ ಬರಹವನ್ನ
ಒಮ್ಮೆ ಯೋಚಿಸು ನೀ ಗೀಚುವಾ ಮುನ್ನ...
ನಿನ್ನ ಗೀಚಿಗೆ ಗೀರಾಗುವುದು ನನ್ನ ಮನ...
Thursday, September 2, 2010
ನನ್ನವನು......!!!??

ಸುಮ್ಮನೆ ಕುಳಿತವಳ
ಮುಂಗುರುಳ ಸವರಿ
ಕಚಗುಳಿಯಿಡುವ
ಕಳ್ಳನಿವನು
ಜೊತೆಯಿರುವೆನೆಂಬ
ಪೊಳ್ಳು ಭರವಸೆಯ ಕೊಡದೆ
ಹೇಳದೆಯೂ ಜೊತೆಯಿದ್ದ
ಜೊತೆಗಾರನಿವನು
ಮಾಗಿ ಮುಂಜಾನೆಯಲಿ
ಮೌನದ ರಾತ್ರಿಯಲಿ
ರೋಮಾಂಚನದಿ ನಶೆಯೇರಿಸುವ
ತುಂಟನಿವನು
ಕತ್ತಲಲಿ ಬೆದರಿ
ಕಂಬನಿಯ ಮಿಡಿವಾಗ
ಮಾತಿಲ್ಲದೆ ಆ ಕಂಬನಿಯ
ಒರೆಸಿದವನು...
ತಂಗಾಳಿಯಂತೆ ಬಂದು
ಬಿರುಗಾಳಿಯೆಬ್ಬಿಸಿ ಹೋದ
ನೆನಪಿನ ಧೂಳೆರಚಿ
ನನ್ನ ಅಳಿಸಿದವನು....
ನನ್ನವನು.......ತಂಗಾಳಿ......!!!???

Wednesday, August 25, 2010
ಏನ ಹೇಳಲಿ ಈ ಬಂಧಕೆ....
ಹೆಸರಿಲ್ಲದಾ ಬಂಧ
ಅರ್ಥವ ಹುಡುಕುತಾ
ನಿಂತಿಹೆನು ಇಲ್ಲಿ
ಲೋಕದಾ ಮಾತಿಗೆ
ಮೌನದಿ ಬಿಕ್ಕಳಿಸಿ
ಕೂಗಿಹೇಳಲಾಗದೆ ಸೋತಿಹೆ
ಮೌನವೇ ಲೇಸಿಲ್ಲಿ
ಕಳೆದುಹೋಗಿದ್ದೆ ನಾ
ಸ್ವಾರ್ಥಿಗಳ ಲೋಕದಲಿ
ದಾರಿಯಾ ಹುಡುಕುತ
ನಿಂತಿದ್ದೆ ಗೊಂದಲದಲಿ
ನಿನ್ನ ನೋಟಕೆ
ಬೆಚ್ಚಿದ್ದೆ ಒಂದು ಕ್ಷಣ
ಅಲ್ಲೇ ಆ ನೋಟದಲೇ ಎನ್ನಂತರಂಗವ
ಅರಿತಿತ್ತು ನಿನ್ನ ಮನ
ಜೊತೆ ನಡೆದ
ಕ್ಷಣಗಳೆಷ್ಟೋ
ಸಾಗಿ ಬಂದ
ದೂರವೆಷ್ಟೋ
ನೋಡಿ ನಕ್ಕರು
ಹುಚ್ಚು ಎಂದರು
ಮತ್ತೆ ಕೆಲವರು
ಪ್ರೇಮವೆಂದರು
ಹೇಗೆ ಹೇಳಲಿ
ನಮ್ಮ ಬಂಧದರ್ಥವ
ವಾತ್ಸಲ್ಯಮಯ
ಈ ಅನುಬಂಧವ
ಮತ್ತೆ ಯೋಚಿಸಿ
ಮನವ ಶೋಧಿಸಿ
ಅರ್ಥ ಹುಡುಕಿ ಹೆಸರ ನೀಡಿ ಬಂಧಿಸಿದೆ
ಅದುವೆ ಈ ‘ರಕ್ಷಾಬಂಧನ’
ನಕ್ಕ ಜಗವು
ಮೆಚ್ಚುವ ಬಂಧವಿದು
ಮಮತೆ ಅಪಾರ...
Sunday, August 15, 2010
ಮತ್ತೆ ಬಂದಿದೆ....
ಮತ್ತೆ ಬಂದಿದೆ ೧೫ ಆಗಸ್ಟು,
ಎಲ್ಲರ ಎದೆಯಲಿ ದೇಶಾಭಿಮಾನ, ಶಿಸ್ತು,
ಕೆಲವು ದಿನಗಳು ಮಾತ್ರ ಕೇಸರಿ ,ಬಿಳಿ ,ಹಸಿರು
ನಮ್ಮೆಲ್ಲರ ಉಸಿರು...
ನಂತರ??
ಯಾರಿಗೆ ಗೊತ್ತು?
ನಮ್ಮ ಅಭಿಮಾನದ ಪ್ಲಾಸ್ಟಿಕ್ ಧ್ವಜ..
ಕಸದಬುಟ್ಟಿಯ ಸೊತ್ತು.
ಬೇಕೇ ಈ ತಾತ್ಕಾಲಿಕ ಅಭಿಮಾನ?
ತೋರೋಣ ಸ್ವಾಭಿಮಾನ,
ಎಲ್ಲರ ಹಿಡಿದೆತ್ತೋಣ..
ಒಂದಾಗಿ ಮುನ್ನಡೆಯೋಣ....

