Monday, December 24, 2012

ಬಿಟ್ಟು ಬಂದೆ


ಪ್ರತಿ ಹೆಜ್ಜೆಗೂ ಅಸಾಧ್ಯ ನೋವು
ಇನ್ನೊಂದು ಹೆಜ್ಜೆ ಇಡಲಾರೆ ಎಂಬಷ್ಟು
ಆದರೂ ನಡೆಯಲೇಬೇಕಾದ ಕರ್ಮ
ಬದುಕಿನ ಬಂಡಿ ಹಾಗೆಯೇ...

ಹುಡುಕಿದರೆ
ನಿಜ ಸ್ವರೂಪ ಕಾಣದಷ್ಟು ತೇಪೆ
ಅದೇ ಚರಪರ ಸದ್ದು
ಆತ್ಮೀಯವಾಗಿಬಿಟ್ಟಿದೆ....
ನೋವಲ್ಲ...ಶಬ್ದ

ಅವಳ ನೋಡು..
ಅವಳಿಗೆಷ್ಟು ಸುಖ
ದಿನಕ್ಕೊಂದು ಬಣ್ಣ
ನೊವಿನ ನರಳಿಕೆಯೇ ಇಲ್ಲ

ಆದರೂ ನಾ ಅವಳಲ್ಲ...

ಇದ್ದುದರೊಂದಿಗೇ ಒದ್ದಾಡಿದೆ
ಗಾಯ ಮಾಯುವವರೆಗೆ ಕಾದೆ
ಕಲೆ ಉಳಿಯಿತು...ಮತ್ತೆ ಮತ್ತೆ ಗಾಯ...
ತುಟಿ ಕಚ್ಚಿ ಮುನ್ನಡೆದೆ
ಆಗಲೇ ಇಲ್ಲ...

ಕ್ಷಣದಲ್ಲೇ ಆಯಿತು ಜ್ಞಾನೋದಯ
ಬೋಧಿ ವೃಕ್ಷ ಇರಲಿಲ್ಲ
ಬದುಕಿತ್ತು.....
ಸಾಕಲ್ಲ ಅಷ್ಟು..
ಹುಟ್ಟಿಂದ ಏನು ಇದರ ಜೊತೆಯೇ ಇದ್ದೆನೇ?
ಇಲ್ಲವಲ್ಲ...
ಬಿಟ್ಟು ಬಂದೆ....


Monday, March 5, 2012

ಗೋರಿಗಳೊಂದಿಗಿನ ಬದುಕು


ಹುಟ್ಟಿದವ ಒಮ್ಮೆಯಾದರೂ ಇಲ್ಲಿ ಬರಲೇಬೇಕು
ಬದುಕು ಮುಗಿದಾಗಲೋ..ಬದುಕು ಮುಗಿಸಿದವರ ಕಳುಹಲೋ...
ನನ್ನದೇನೋ ಕರ್ಮ ನಾ ಬದುಕು ಕಂಡಿದ್ದಿಲ್ಲಿ..
ಸತ್ಯವನೆ ನಂಬಿದವನ ಕರ್ಮಭೂಮಿಯಾಗಿತ್ತಿದು
ನನಗೂ ಅದೇ ರೂಢಿ...
ಸುಳ್ಳಿಂದ ಆಗಬೇಕಾದ್ದೇನು??
ಇಲ್ಲಿ ಕ್ಷಣಕ್ಕೊಂದು ಸಾವು, ಸಾವಿಗೊಂದು ಕಾರಣ
ಕ್ಷಣದಲ್ಲೇ ಬಿಡುಗಡೆ ಎಲ್ಲ ಬಂಧಗಳಿಂದ
ಬದುಕಿದ್ದ ಮೂರು ಕ್ಷಣ ಮಾಡಿದ್ದೊಂದೇ ಸತ್ಯ
ತಪ್ಪದ ಸಾವು ಒಬ್ಬರಿಗೊಂದು ತರ
ಅಸ್ತಿತ್ವವ ಕಳೆವುದದು....
ಹೆಸರಿಗಸ್ತಿತ್ವವ ಕೊಡುವುದದು...
ಯಾರನ್ನೂ ಬಿಡದ ಮಾಯೆಯದು
ಇನ್ಯಾರಿಗಿದೆ ಎಲ್ಲರನ್ನೆಳೆದು ತಂದು ತಣ್ಣನೆ ಮಲಗಿಸುವ ಜಾಣ್ಮೆ...
ಜಗದ ಸದ್ದಿಗೆ ಇಲ್ಲಿಲ್ಲ ಬೆಲೆ
ಅಬ್ಬರ ಆರ್ಭಟಗಳೆಲ್ಲ ಗೋರಿ ಮೇಲಿನ ಚಿತ್ರ..
ಆದರೆ ಎಲ್ಲ ಮೀರಿ ಹೊರಟವ ಹೊದ್ದಿಹನು ಭೂತಾಯಿಯ ಸೆರಗ
ಯಾರ ಮುದ್ದಿನ ಕೂಸೋ...ಯಾರ ಹೆತ್ತವರೋ....
ಯಾರ ಬಂಧುಗಳೋ....
ನನಗೆ ಮಾತ್ರ ಜೀವವಿಲ್ಲದ ದೇಹ.....
ಅವರ ಭಾವಗಳು ಅವರಿಗೆ...
ನನಗೋ ಕೊನೆಯಾದ ಬದುಕಿನ ಭಾವ ಹುಡುಕುವ ಹುಚ್ಚು
ಹುಟ್ಟು ಸಾವಿನ ನಡುವೆ ಬದುಕು...
ನನ್ನದು...ಸಾವುಗಳ ನಡುವೆ ಬದುಕು!!!
ದಿನವೂ ಅದೇ ಕೆಲಸ  ಎಂಬ ಬೇಸರ ಕೆಲವೊಮ್ಮೆ...
ಆದರೂ....
ಸತ್ತ ಸಂಬಂಧಗಳ ಜತೆಯ ಬದುಕಿಗಿಂತ....
ನನಗೇನೋ ಗೋರಿಗಳ ಜತೆಗಿನ ಬದುಕೇ ಸುಂದರ.

Monday, July 18, 2011

ಕಳೆದುಹೋಗಿದೆ ಕವಿತೆ...

ಯಾಕೋ ಬರೆಯೋಕೆ ಬೇಜಾರು ಅನ್ನಿಸೋಕೆ ಶುರುವಾಗಿ ಸ್ವಲ್ಪ ದಿನಗಳಾಗಿತ್ತು..ಬರೆದ ಕೆಲ ಸಾಲುಗಳೂ ಅಪೂರ್ಣವೆನ್ನಿಸುತ್ತಿತ್ತು....blog ಗೆ ಏನನ್ನೂ ಬರೆಯದೆ ತುಂಬಾ ದಿನಗಳಾಯ್ತು ಏನಾದರೂ ಹಾಕೋಣ ಎಂದು ಹಳೆಯ ಒಂದು ಕವಿತೆಯನ್ನ ಬರೆದಿಟ್ಟದ್ದು ನೆನಪಿಸಿಕೊಂಡೆ. ಆದರೆ ಅದನ್ನ ಬರೆದಿಟ್ಟ ಪುಟ ಸಿಗಲೇ ಇಲ್ಲ...ಆಗ ಹೊಳೆದ ಸಾಲುಗಳಿವು....


ಕಳೆದುಹೋಗಿದೆ ಕವಿತೆ
ಎಲ್ಲೋ ಉದುರಿಹೋಗಿವೆ ನಾ ಬರೆದಿಟ್ಟ ಅಕ್ಷರಗಳು
ಸಿಕ್ಕಿದರೆ ಸಾಕೆನಗೆ ಕೆಲವೇ ಕೆಲವು ಚರಣಗಳು
ಯಾಕೆ ಕಳೆದುಹೋಗಿದ್ದೆ ಎಂದು ನಾ ಗದರಬೇಕದಕ್ಕೆ

ಮನದೊಳಗಿನ ಪ್ರತಿ ಭಾವದ ಬಣ್ಣಗಳನು
ಬಸಿದು,ಬೆಸೆದು, ಹೊಸೆದ  ಸಾಲುಗಳು
ಕಣ್ಣಂಚಿನ ಹನಿಯು ಜಾರುವ ಮುನ್ನ
ಪದವಾದ ನೋವು-ನಲಿವುಗಳು

ಅವಳ ಅವನ ಅದರ...
ಎಂದು ಹಳೆಯ ನೆನಪಿನಲಿ ಎಂದೋ ಗೀಚಿಟ್ಟ ಕವಿತೆ 
ಪುಟದೊಂದಿಗೆ ಶಾಮೀಲಾಗಿ ಹಾರಿಹೊಯಿತೇ ನನ್ನ ಬಿಟ್ಟು

ಅಪೂರ್ಣವೆಂದಿದ್ದಕ್ಕೆ ಬೇಸರವೋ 
ತೃಪ್ತಿ ನೀಡದ ಸಾಲು ಎಂದು ಮುನಿಸೋ
ಕಾರಣ ಹೇಳಲು ಸಾಲುಗಳೇ ಇಲ್ಲ!!!

ಭಾವ ಬೆಸೆವ ಸಾಲುಗಳು 
ದ್ವೇಷ ಮರೆಸುವ ಸಾಲುಗಳು 
ಸವಿ ನೆನಪಿನ ಸಾಲುಗಳು....
ಕಳೆದುಹೋಗಿವೆ....ಸಿಕ್ಕಿದರೆ ಕೊಟ್ಟುಬಿಡಿ
ಮನಸಿಗೆ ಮುದನೀಡುವ ನನ್ನ ನೆಚ್ಚಿನ ಸಾಲುಗಳನು..


ಹಾರುತಿದ್ದ ಪುಟಗಳ ಚಿತ್ರವ ಹಿಡಿದಿದ್ದು:ಅಂತರ್ಜಾಲದಲ್ಲಿ :)


Tuesday, March 8, 2011

ಮಹಿಳಾ ದಿನ!!!!!



ಒಂದೆಡೆ....
ಕೈಲೊಂದು ಪುಟ್ಟ ಗುಲಾಬಿ ಹಿಡಿದು
ಮುದ್ದಾಗಿ ನಗುವ ಮಗು
ಜೊತೆಯಲ್ಲಿ ಕೆಲವರ,
Happy women's day ಎನ್ನುವ wish


ಈ ಒಂದು ದಿನ..
angel,pretty dolls...
ಎಂದೆಲ್ಲಾ ಹೊಗಳುವ message ಗಳು
ನಮಗೊಂದು ದಿನ ಎಂದು ಸಂಭ್ರಮಿಸುವ,ನಗುವ ಹುಡುಗಿಯರು


ಮತ್ತೊಂದೆಡೆ...
ತುತ್ತಿಗೂ ಪರಿತಪಿಸುವ ಹಲವು ಜೀವಗಳು
ಹುಟ್ಟಿಗೂ ಮೊದಲೇ ಸತ್ತ ಹೆಣ್ಣು ಭ್ರೂಣ,
ಸಾಧನೆಯ ಹಾದಿಯಲ್ಲಿ ತೊಡಕಾಗುವ ಕಾಮುಕರು,
ಪ್ರತಿಭಟಿಸಲಾಗದೆ ತಡೆದುಕೊಳ್ಳಲು ಆಗದ ಕಿರುಕುಳಗಳು


ದಯಾಮರಣ ಬೇಡುವಂಥಾ
ಸ್ಥಿತಿಯಲ್ಲಿರುವ ದೈನ್ಯ ಹೆಣ್ಣು,...
ದಿನ ದಿನವೂ ಅತ್ಯಾಚಾರ,acid ಗಳ
ಭಯದಲ್ಲಿ ಮುದುಡುವ ಮುಗ್ಧೆ...
ವಾಂಛೆಗೆ ಬಲಿಯಾದ
ಅದೆಷ್ಟೋ ಜೀವಗಳ ಕಣ್ಣೀರ ನೋಡಲೂ ಪುರುಸೋತ್ತಿಲ್ಲದವರು....


ಈ ಎಲ್ಲದರ ಜೊತೆಗೆ ಅತಿಶಯವೆನಿಸಿದರೂ.....
ಇಂದು ಮಹಿಳಾ ದಿನ!!!!!!


ಮೊಗೆಮೊಗೆದು ಪ್ರೀತಿ ಹಂಚುವವಳಿಗೆ...
ಅಬ್ಬರದ celebration ಬೇಡ... 
ಬೊಗಸೆ ಪ್ರೀತಿಯ ಜೊತೆಗೆ...
ಹೆಣ್ಣಾಗಿ ಬದುಕುವ ಹಕ್ಕು ಕೊಡಿ....

Monday, February 28, 2011

ನನ್ನ್ ಗೆಳೆಯ....

'ಗೆಳತಿಯ ಬಗ್ಗೆ ನಿನ್ನ ಪುಸ್ತಕದಲ್ಲಿ ಕವನ ಇದೆ....ಗೆಳೆಯನ ಬಗ್ಗೆ ಬರೆದಿಲ್ಲ...ಇದು ಮೋಸ' ಎಂದು ಗೆಳೆಯನೊಬ್ಬ ಹೇಳಿದಾಗ ನಂಗೂ ಹೌದೆನ್ನಿಸ್ತು...so ಹೀಗೊಂದು ತರಲೆ try....


ಸುಮ್ನೆ ಹೋಗ್ತಿದ್ರೆ
ತಲೆಗೊಂದು ಮೊಟಕುವವ,
ಯಾರೆಂದು ತಿರುಗಿದರೆ..
ಮತ್ತೊಂದು ಮೊಟಕಿ 'ನಾನೇ ಕಣೇ'
ಎನ್ನುವ ತುಂಟ ನಗೆಯ ಗೆಳೆಯ.

ಬದುಕು-ಬೇಸರ ಅಂತೆಲ್ಲಾ
ವೇದಾಂತ ಹೇಳ್ತಿದ್ರೆ...
'ಮನೇಲಿ ಹೇಳಿಬಂದಿದ್ಯಾ??'ಅಂತ
ಮುಲಾಜಿಲ್ಲದೆ ಉಗಿತಾನಲ್ಲ..
ಅವನೇ ನನ್ನ ಗೆಳೆಯ.

ರುಚಿ ಇಲ್ಲದ ಊಟ
ಸೇರಲ್ಲ ಕಣೋ ಅಂದ್ರೆ..
ಇಂದು ತಾನೂ ಉಪವಾಸ
ಎಂದು ಬೆದರಿಸಿ ಉಣಿಸುವ
horrible ಗೆಳೆಯ...

ನಡುರಾತ್ರೀಲಿ call ಮಾಡಿ
'ಮಲಗಿದ್ಯೇನೆ?ಸರಿ ಬರ್ಲಾ...'
ಎಂದು ಮುಸಿ ಮುಸಿ ನಗುವ ತರಲೆ
ಆದರೂ sweet ಎನ್ನಿಸುವ ಗೆಳೆಯ

ಮನದಲಿದ್ದುದನೆಲ್ಲ
silly ಅನಿಸಿದರೂ ಸರಿಯೇ
ಸುಮ್ಮನೆ ಹೊರ ಹಾಕಿ
'ಕೇಳೋದು ನಿನ್ನ್ ಕರ್ಮ'ಎನ್ನುವ
ಮಗುವಿನಂಥಾ ಗೆಳೆಯ

ಅಮ್ಮನಂಥಾ ಗೆಳೆಯ
ಅಣ್ಣನಂಥಾ ಗೆಳೆಯ...
ಮನದ ಗೂಡಲ್ಲಿರುವ ಮುಗ್ಧ ಗೆಳೆಯ...
sorry...ಇವ ಇನಿಯನಲ್ಲ 'ನನ್ನ ಗೆಳೆಯ'

Saturday, February 26, 2011

ಅಪ್ಪನ ಹೆಜ್ಜೆ ಗುರುತು....

hi friends...ಚಿಕ್ಕೋರಿದ್ದಾಗ ಎಲ್ಲರಿಗೂ ಅಪ್ಪ ನೇ ಹೀರೋ..ಬೆಳೆಯುತ್ತಾ ಎಲ್ಲೋ ಒಮ್ಮೊಮ್ಮೆ ಅಪ್ಪನ ವಿಚಾರ ತಪ್ಪು ಎನ್ನಿಸುವುದೂ ಇದೆ...ಆದರೂ ಅಪ್ಪನ ಅನುಭವ ನಮಗೆ ಪಾಠ.ಹೀಗೆ ಅನುಭವ,ಕಲ್ಪನೆ ಎರಡನ್ನೂ ಜೊತೆಗೂಡಿಸಿ, ಗೀಚಿ ನಿಮ್ಮ ಮುಂದಿಟ್ಟಿದ್ದೇನೆ..ಹೇಗಿದೆ??ಓದಿ ಹೇಳಿ.

ಭುವನಾ ಇಳಿಸಂಜೆಯ ಹೊತ್ತಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಮುದ್ರದ ಅಂಚಲ್ಲಿ ಕುಳಿತಿದ್ದಳು....ಅದು ಆಕೆಗೆ ತುಂಬಾ ಇಷ್ಟವಾದ ಜಾಗ...ಅಲ್ಲಿರುವ ಮರಳ ಕಣಗಳಷ್ಟೇ ಮಧುರ ನೆನಪುಗಳು ಆ ತೀರದಲ್ಲಿ ಅಡಗಿ ಕುಳಿತಿವೆ...ಆಗೊಮ್ಮೆ ಈಗೊಮ್ಮೆ ಕಣ್ಣೀರ ಹನಿಯೂ ಆ ಮರಳಿನಲ್ಲಿ ಇಂಗಿದ್ದಿದೆ.ಒಟ್ಟಿನಲ್ಲಿ ಆ ತೀರಕ್ಕೂ ಆಕೆಗೂ ಅವಿನಾಭಾವ ಸಂಬಂಧ.ಜೊತೆಯಲ್ಲಿ ಯಾರಾದರೂ ಇದ್ದರೆ ಅಲೆಗಳ ಜೊತೆ ಚೆಲ್ಲಾಟ,ಇಲ್ಲವಾದರೆ ಹಾಗೇ ಸುಮ್ಮನೆ ಅವುಗಳನ್ನ ನೋಡುತ್ತಾ ಕಾಲ ಕಳೆಯುವುದು ಅವಳಿಗೆ ಅಚ್ಚುಮೆಚ್ಚು.ಆ ದಿನವೂ ಹಾಗೇ...ಸುಮ್ಮನೆ ಮರಳ ಮೇಲೆ ಕುಳಿತಿದ್ದಳು,ಅಂಟಿಕೊಂಡು ಹೆಜ್ಜೆಹಾಕುತ್ತಿದ್ದ ಪ್ರೇಮಿಗಳು,ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಜನರು..ಮರಳಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳು...ಹೀಗೆ ಎಲ್ಲರ ಕಡೆಗೆ ತನ್ನ ನೋಟ ಬೀರಿದಳು..ಅವಳ ನೋಟವನ್ನು ಸೆಳೆದಿದ್ದು ಒಂದು ಪುಟಾಣಿ ಮಗು,ಅದು ತನ್ನ ಅಪ್ಪನ ಹಿಂದೆ ನಡೆಯುತ್ತಿತ್ತು,ಆ ಪುಟ್ಟ ಪುಟ್ಟ ಕಾಲುಗಳಿಂದ ಹೆಜ್ಜೆಯಿದುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಪ್ಪನ ಹೆಜ್ಜೆಗುರುತಿನ ಮೇಲೆ ತನ್ನ ಹೆಜ್ಜೆಯನ್ನು ಇಡಲು ಹರಸಾಹಸಪಡುತ್ತಿತ್ತು.ಆ ದೃಶ್ಯ ಅವಳನ್ನು ಹಳೆಯ ದಿನಗಳಿಗೆ ಎಳೆದುಕೊಂಡು ಹೋಯ್ತು....'ನಾನೂ ಹೀಗೆ ಅಪ್ಪನ ಹಿಂದೆ ನಡೆಯುತ್ತಿದ್ದೆ...ಆ ಹೆಜ್ಜೆಗಳ ಮೇಲೆ ಹೆಜ್ಜೆ ಇಡಲು ಕಷ್ಟಪಡುತ್ತಿದ್ದೆ...ಬಿದ್ದರೂ ಸರಿಯೇ ಮತ್ತೆ ಅದೇ ಯತ್ನ,ಅಪ್ಪ ಹಲವು ಬಾರಿ ನಗುತ್ತಿದ್ದರು.ಅಮ್ಮ ಹೇಳುವುದಿತ್ತು 'ಅಪ್ಪನ ಪಡಿ ಅಚ್ಚು ಈ ಕೂಸು,ಅನ್ಸಿದ್ದನ್ನ ಮಾಡೋವರೆಗೂ ಬಿಡಲ್ಲ'ಅಂತ, ಅವರು ಹೇಳಿದ್ದರಲ್ಲಿ ಅತಿಶಯ ಏನಿರಲಿಲ್ಲ,ನನ್ನಪ್ಪ ನಂಗೆ ತುಂಬಾ ಇಷ್ಟ.ಮಿತವಾದ ಮಾತು ಹಿತವೆನಿಸುವ ನಡೆ,ತನ್ನ ಆದರ್ಶದಂತೆ ಬದುಕುತ್ತಿದ್ದ ಅವರು ಎಂದಿಗೂ ಅವುಗಳನ್ನೂ ನಮ್ಮ ಮೇಲೆ ಹೊರಿಸಿದ್ದಿಲ್ಲ.ಪ್ರತಿಯೊಂದಕ್ಕೂ ಸಲಹೆ ಮಾತ್ರ ಅವರದ್ದು ಆಯ್ಕೆ ಮಾತ್ರ ನನ್ನದೇ...ಮಗಳ ಆಯ್ಕೆ ತಪ್ಪಿರಬಹುದೇ? ಎಂಬ ಕಿಂಚಿತ್ ಶಂಕೆಯೂ ಇರುತ್ತಿರಲಿಲ್ಲ.ನನ್ನ ಬೆಳೆಸಿದ ರೀತಿಯಲ್ಲಿ ಅಪ್ಪನಿಗೆ ಅಚಲವಾದ ವಿಶ್ವಾಸ.ಅವರ ಜೀವನ ಶೈಲಿ ತುಂಬಾ ಸರಳ,ಅಪ್ಪಾ ಹೊಸ ಬಟ್ಟೆ ತಗೋ ಇದು ಹಳೆಯದಾಯ್ತು ಅಂದ್ರೆ ‘ನಮ್ಮ ವ್ಯಕ್ತಿತ್ವದಿಂದ ಗೌರವ ಸಿಗಬೇಕೇ ಹೊರತು ಬಟ್ಟೆ,ಅಲಂಕಾರಗಳಿಂದಲ್ಲ.’ಎನ್ನುವ ಉತ್ತರ.!!ಗೊಡ್ಡು ಸಂಪ್ರದಾಯವನ್ನು ಎಂದಿಗೂ ಒಪ್ಪುತ್ತಿರಲಿಲ್ಲ.ಸತ್ಯ,ಪ್ರಾಮಾಣಿಕತೆ ಬದುಕಿನ ಆಧಾರಸ್ತಂಭಗಳು ಎಂದು ನಂಬಿದ್ದವರು...ಅಪ್ಪನ ಬಗ್ಗೆ ಎಷ್ಟು ಹೇಳಿದರೂ ಸಾಲದು.ಹರೆಯದಲ್ಲಿ ಕೆಲವು ಬಾರಿ ಅಪ್ಪನ ವಿಚಾರಧಾರೆ ಸರಿಯಾಗಿ ಅರ್ಥವಾಗದೆ ಅಲ್ಲೋ ಇಲ್ಲೋ ಒಮ್ಮೆ ದಾರಿ ಬದಲಿಸಲೇ ಎಂದು ಬುದ್ದಿ ಮನಸನ್ನು ಕೇಳಿದ್ದಿದೆ..ಆದರೆ ಮನಸು ಮಾತ್ರ ಅಪ್ಪನ ದಾರಿಯನ್ನು ಬಿಡಲು ಒಪ್ಪಲೇ ಇಲ್ಲ...ಮನಸಿನ ಮಾತನ್ನ ಕೆಳುವವಳು ನಾನು ಅದಕ್ಕೆ ಅಪ್ಪನ ದಾರಿಯಲ್ಲೇ ನಡೆದೆ.ಕಳೆದುಹೋದವರ ಬಗ್ಗೆ ಬೇಜಾರಿದೆ,ಆದರೆ ಜೋತೆಯಿರುವವರೆಲ್ಲಾ ಎಂದಿಗೂ ಕೈ ಬಿಡದವರು.ಇದೆಲ್ಲಾ ಅಪ್ಪನ ಆದರ್ಶಗಳನ್ನು ನಾ ಇಷ್ಟಪಟ್ಟು ಮೈಗೂಡಿಸಿಕೊಂದಿದ್ದಕ್ಕೆ.ಅದರಲ್ಲೂ ನನ್ನ ಸ್ವಂತಿಕೆ ಇರುವಂತೆ ನನ್ನ ಬದುಕನ್ನ ರೂಪಿಸಿಕೊಳ್ಳುವ ಅವಕಾಶ ಕೊಟ್ಟಿದ್ದು ಈ ನನ್ನಪ್ಪ....ಹೊತ್ತು ಮುಳುಗುತ್ತಿದ್ದಂತೆ ರಭಸಗೊಂಡ ಅಲೆಗಳಂತೆ ಅಪ್ಪನ ಮೇಲಿನ ಅಭಿಮಾನ ಹೆಚ್ಚಾಗುತ್ತಲೇ ಇತ್ತು..ಸಮಯದ ಅರಿವಿಲ್ಲದೆ ಯೋಚನಾ ಲಹರಿಯಲ್ಲಿ ಇದ್ದ ಅವಳು ವಾಸ್ತವಕ್ಕೆ ಬಂದದ್ದು ಅಪ್ಪ ಬಂದು 'ಮಗಳೆ ಬಾ ಮನೆಗೆ ಹೋಗೋಣ ಅಮ್ಮ ಕಾಯ್ತಾ ಇರ್ತಾಳೆ ಎಂದಾಗ..'ಮತ್ತೆ ಅಪ್ಪನ ಹೆಜ್ಜೆಯ ಮೇಲೆ ತನ್ನ ಹೆಜ್ಜೆ ಇಡುತ್ತಾ ಮನೆಯ ದಾರಿ ಹಿಡಿದಳು.

Thursday, January 6, 2011

ರುಚಿcut ಆದ ತಿನಿಸುಗಳು


hi friends...
ನಮ್ಮ ಹಾಸ್ಟೆಲ್ ನಲ್ಲಿ ಮಾಡುವ ಕೆಲವು ರುಚಿcut ಆದ ಕೆಲವು ತಿನಿಸುಗಳ ಮಾಡುವ ವಿಧಾನ jsut for u.
(ಈ ಎಲ್ಲ recipie try ಮಾಡೋದಾದ್ರೆ ನಿಮ್ಮ taste buds ಜೀವಕ್ಕೆ ನೀವೇ ಹೊಣೆ)

ಹಾಲು:
ತಯಾರಿಸುವ ವಿಧಾನ:ಇದೇನಪ್ಪಾ?ಹಾಲು ತಯಾರಿಸೋ ವಿಧಾನ ಅಂತ ಇದೆ.ಹಾಲು ಪುಡಿ ಹಾಕಿ ಅಂತ ಅನ್ಕೊಂಡ್ರಾ?ಖಂಡಿತ ಇಲ್ಲ...ನೀವೇ ಓದಿ ನೋಡಿ ....
ನೀರನ್ನು ಕಾಯಲು ಇಡಿ.ನೀರು ಕುದಿ ಬಂದ ಕೂಡಲೇ ಅದಕ್ಕೆ ಹಾಲಿನ ಹನಿಯನ್ನು ಹಾಕುತ್ತಿರಿ.ನೀರಿನ ಬಣ್ಣ ಬದಲಾದ ತಕ್ಷಣ ಹಾಲಿನ ಹನಿಯನ್ನು ಹಾಕುವುದನ್ನು ನಿಲ್ಲಿಸಿ.(same as titration ;) )
ಬಿಸಿ ಬಿಸಿ ಹಾಲು ಸಿಧ್ಧ.ಇನ್ನು ಈ ಹಾಲಿನ ಮೊಸರು ಇನ್ನೆಷ್ಟು ಗಟ್ಟಿ ಇರಬಹುದು??ನೀವೇ ಊಹಿಸಿ.(ಅದಕ್ಕೆ safetyಗೆ ನಾವು ಚಾಕು ತಗೊಂಡು ಊಟಕ್ಕೆ ಹೋಗ್ತೀವಿ.ಗಟ್ಟಿ ಮೊಸರನ್ನು cut ಮಾಡಲು;) )
ಚಹಾ:
ಕುದಿಯುತ್ತಿರುವ ನೀರಿಗೆ ಚಹಾ ಪುಡಿ ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೋಸಿ ಅದಕ್ಕೆ ಸಕ್ಕರೆ ಮತ್ತು ಈ ಮೇಲೆ ತಯಾರಿಸಿದ ಹಾಲು ಎಂಬ ಪದಾರ್ಥವನ್ನು ಸೇರಿಸಿದರೆ ಬಿಸಿ ಬಿಸಿ ಚಹಾ ಸಿಧ್ಧ.

ತಿಳಿ ಸಾರು(ನೀರು)
ಕುದಿಯುತ್ತಿರುವ ನೀರಿಗೆ ಸ್ವಲ್ಪ ಉಪ್ಪು ಮೆಣಸಿನಪುಡಿ ಹಾಕಿ ಚೆನ್ನಾಗಿ ಕಲಕಿ.ಅದಕ್ಕೆ ಹೆಚ್ಚಿಕೊಂಡಿರುವ ಟೊಮೆಟೋ ಹಾಕಿ ನಂತರ ಒಗ್ಗರಣೆ ಮಾಡಿದರೆ ತಿಳಿ ಸಾರು ಸವಿಯಲು ಸಿಧ್ಧ.

ದಾಲ್ ಮತ್ತು ಸಾಂಬಾರ್:
ಬೇಳೆಯನ್ನು ಬೇಯಲು ಇಡಿ.ನಂತರ ಅದರ ನೀರನ್ನು ಬಸಿದು ಆ ನೀರಿಗೆ ಸ್ವಲ್ಪ ಉಪ್ಪು ಹಾಗು ಹುಣಸೆಹುಳಿ ಜೊತೆಗೆ ಮೆಣಸಿನಪುಡಿ ಹಾಕಿ ತರಕಾರಿಯ ಹೋಳನ್ನು ತೇಲಿಬಿಡಿ(ತರಕಾರಿ ಎಂದರೆ ಮೂಲಂಗಿ,ಬದನೇಕಾಯಿ ಹಾಗೂ ಸೌತೆಕಾಯಿ ಮಾತ್ರ.)ಟೊಮೆಟೋ ಮತ್ತು ಈರುಳ್ಳಿಯ ಪ್ರಮಾಣ ಮಾರುಕಟ್ಟೆಯಲ್ಲಿ ಅದರ rate ಎಷ್ಟು ಎನ್ನುವುದರ ಮೇಲೆ depend.
ಮತ್ತೊಂದು ಪಾತ್ರೆಯಲ್ಲಿರುವ ಬೇಳೆಗೆ ಉಪ್ಪು ಹಾಕಿ ಜೊತೆಗೆ ಒಂದಷ್ಟು ಹಸಿಮೆಣಸಿನಕಾಯಿ ಟೊಮೆಟೋ ಮತ್ತು ಈರುಳ್ಳಿ ಹಾಕಿ ಬೇಯಿಸಿದರೆ ದಾಲ್ ready.

ಜಾಮೂನ್:

ಜಾಮೂನ್ ಮಿಕ್ಸ್ ಗೆ ಸ್ವಲ್ಪ ಮೈದಾಹಿಟ್ಟನ್ನು ಹಾಕಿ ಬೇಕಾದಷ್ಟು ನೀರನ್ನು ಹಾಕಿ ಕಲಸಿ.ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ.(ನೆನಪಿರಲಿ ಜಾಮೂನ್ ಉಂಡೆ ಮಧ್ಯದಲ್ಲಿ ಬೇಯಬಾರದು)
ಸಕ್ಕರೆ ಪಾಕ ಮಾಡುವ ವಿಧಾನ:ನೀರಿಗೆ ಸಕ್ಕರೆ ಹಾಕಿ ಕುದಿಯಲು ಇಡಿ.ಕುದಿಯುವ ಮುನ್ನವೇ ಅದಕ್ಕೆ ಕರಿದಿಟ್ಟ ಉಂಡೆಗಳನ್ನು ಹಾಕಿದರೆ ಜಾಮೂನ್ ಸಿಧ್ಧ.:)

ಮರಳು ಮರಳಾಗಿರುವ ಮರಳುಂಡೆ(ರವೆ ಉಂಡೆ)
ಬಾಣಲೆಗೆ ವನಸ್ಪತಿಯನ್ನು ಹಾಕಿ.ಜೊತೆಗೆ ತುಪ್ಪ ಎನ್ನುವ ದ್ರವವನ್ನು ತೋರಿಸಿ.ರವೆಯನ್ನು ಹುರಿದುಕೊಳ್ಳಿ.ಪೂರ್ತಿಯಾಗಿ ಹುರಿಯಬಾರದು.ನಂತರ ಸಕ್ಕರೆಪಾಕವನ್ನು (ಜಾಮೂನ್ ಗೆ ತಯಾರಿಸುವಂತೆ ಸಕ್ಕರೆಪಾಕವನ್ನು ತಯಾರಿಸಿಕೊಳ್ಳಿ)ಹಾಕಿ mix ಮಾಡಿ ಉಂಡೆಕಟ್ಟಿ.ಬೇಕಾದರೆ ತಿನ್ನಬಹುದು ಇಲ್ಲವಾದರೆ table tennis ball ಆಗಿಯೂ ಉಪಯೋಗಿಸಬಹುದು.multipurpose
ಸಧ್ಯಕ್ಕೆ ಇಷ್ಟು ಸಾಕು.ಓದಿ ಆನಂದಿಸಿ.ಇದನ್ನು ತಿನ್ನುವ ನಮ್ಮ ಪಾಡೇನು?????